ನಟ ವಿಜಯ್ ದೇವರಕೊಂಡ
Insta/thedeverakonda
ಹೈದರಾಬಾದ್: ಬುಡಕಟ್ಟು ಜನಾಂಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಾಗಿ ಆರೋಪಿಸಿ ತೆಲುಗು ನಟ ವಿಜಯ್ ದೇವರಕೊಂಡ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಏಪ್ರಿಲ್‌ನಲ್ಲಿ ನಡೆದ ನಟ ಸೂರ್ಯ ಅಭಿನಯನದ ರೆಟ್ರೊ ಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು 500 ವರ್ಷಗಳ ಹಿಂದಿನ ಬುಡಕಟ್ಟು ಯುದ್ಧಗಳಿಗೆ ಹೋಲಿಸಿದ್ದರು. ಇದರಿಂದ ಬುಡಕಟ್ಟು ಜನಾಂಗದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಜೂನ್ 17ರಂದು ದೂರು ಸಲ್ಲಿಕೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷ ನೆನವತ್ ಅಶೋಕ್ ಕುಮಾರ್ ನಾಯಕ್ ಅಲಿಯಾಸ್ ಅಶೋಕ್ ರಾಥೋಡ್ ನಟನ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇವರಕೊಂಡ ಅವರು ಬುಡಕಟ್ಟು ಜನಾಂಗದವರನ್ನು ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ಹೋಲಿಸಿದ್ದಾರೆ ಮತ್ತು ಅವರ ಹೇಳಿಕೆಗಳು ಆಕ್ರಮಣಕಾರಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ನಟನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 3ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ದೇವರಕೊಂಡ, ನನ್ನ ಹೇಳಿಕೆಯು ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಸುವ ಉದ್ದೇಶವಿರಲಿಲ್ಲ. ನನ್ನ ಹೇಳಿಕೆಯಿಂದ ನೋವುಂಟಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಶಾಂತಿ, ಪ್ರಗತಿ ಮತ್ತು ಒಗ್ಗಟ್ಟಿನ ಬಗ್ಗೆ ಮಾತನಾಡುವುದೇ ನನ್ನ ಏಕೈಕ ಗುರಿಯಾಗಿತ್ತು ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.