ADVERTISEMENT

ದಿ ತಾಜ್ ಸ್ಟೋರಿ: ಕಿಡಿ ಹೊತ್ತಿಸಿದ ಪರೇಶ್ ರಾವಲ್ ನಟನೆಯ ಸಿನಿಮಾ ಪೋಸ್ಟರ್‌

ಪಿಟಿಐ
Published 30 ಸೆಪ್ಟೆಂಬರ್ 2025, 10:50 IST
Last Updated 30 ಸೆಪ್ಟೆಂಬರ್ 2025, 10:50 IST
<div class="paragraphs"><p>ದಿ ತಾಜ್ ಸ್ಟೋರಿ</p></div>

ದಿ ತಾಜ್ ಸ್ಟೋರಿ

   

ಎಕ್ಸ್ ಚಿತ್ರ

ನವದೆಹಲಿ: ನಟ ಪರೇಶ್ ರಾವಲ್ ಅವರ ಮುಂದಿನ ಚಿತ್ರ ‘ದಿ ತಾಜ್ ಸ್ಟೋರಿ’ಯಲ್ಲಿ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌ನ ಗುಮ್ಮಟ ತೆಗೆಯುವಂತಿರುವ ಹಾಗೂ ಅಲ್ಲಿಂದ ಶಿವನ ಪ್ರತಿಮೆ ಹೊರಹೊಮ್ಮುತ್ತಿರುವಂತೆ ತೋರಿಸಲಾಗಿರುವ ಪೋಸ್ಟರ್‌ ಭಾರೀ ವಿವಾದ ಹುಟ್ಟುಹಾಕಿದೆ. 

ADVERTISEMENT

ಸ್ವರ್ಣಿಮ್ ಗ್ಲೋಬಲ್ ಸರ್ವಿಸ್ ಸಂಸ್ಥೆ ನಿರ್ಮಿಸಿರುವ ಈ ಚಿತ್ರವನ್ನು ಅಮರೀಶ್ ಗೋಯಲ್ ನಿರ್ದೇಶಿಸಿದ್ದಾರೆ. ಸಿ.ಎ. ಸುರೇಶ್ ಝಾ ನಿರ್ಮಿಸಿದ್ದಾರೆ.

ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ಸೋಮವಾರ ನಡೆದಿದೆ. ‘ನಿಮಗೆ ಕಲಿಸಿದ್ದೆಲ್ಲವೂ ಸುಳ್ಳಾಗಿದ್ದರೆ ಏನು ಮಾಡುತ್ತೀರಿ? ಸತ್ಯವನ್ನು ಕೇವಲ ಮುಚ್ಚಿಟ್ಟಿಲ್ಲ; ಅದನ್ನು ನಿರ್ಣಯಿಸಲಾಗುತ್ತದೆ. ಅ. 31ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ #TheTajStory ಯೊಂದಿಗೆ ಸತ್ಯಗಳನ್ನು ಅನಾವರಣಗೊಳಿಸಿ’ ಎಂಬ ಒಕ್ಕಣೆಯೂ ಇದರಲ್ಲಿದೆ.

ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಪ್ರಚಾರದ ತಂತ್ರ ಹಾಗೂ ನಕಲಿ ಎಂದು ಜರಿದಿದ್ದಾರೆ.

ವಿವಾದ ಭುಗಿಲೇಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಸ್ವರ್ಣಿಮ್ ಗ್ಲೋಬಲ್ ಸರ್ವಿಸ್ ಕಂಪನಿ, ‘ಈ ಚಿತ್ರದಲ್ಲಿ ಯಾವುದೇ ಧಾರ್ಮಿಕ ವಿಷಯಗಳನ್ನು ಹೇಳಿಲ್ಲ. ತಾಜ್ ಮಹಲ್ ಒಳಗೆ ಶಿವ ದೇವಾಲಯವಿದೆ ಎಂದೂ ಹೇಳಿಲ್ಲ. ಚಿತ್ರದ ಕಥಾವಸ್ತುವು ಕೇವಲ ಐತಿಹಾಸಿಕ ಸಂಗತಿಗಳ ಮೇಲೆ ಕೇಂದ್ರೀಕರಿಸುತ್ತದೆ. ದಯವಿಟ್ಟು ಚಿತ್ರವನ್ನು ವೀಕ್ಷಿಸಿ ಮತ್ತು ನಿಮ್ಮ ಸ್ವಂತ ಅಭಿಪ್ರಾಯವನ್ನು ದಾಖಲಿಸಿ’ ಎಂದಿದೆ.

ಇತ್ತೀಚೆಗೆ ಬಿಡುಗಡೆಯಾದ ‘ದಿ ಉದಯಪುರ್ ಫೈಲ್ಸ್’ ಮತ್ತು ‘ದಿ ಬೆಂಗಾಲ್ ಫೈಲ್ಸ್’ ನಂತಹ ಶೀರ್ಷಿಕೆಗಳ ನಂತರ ‘ದಿ ತಾಜ್ ಸ್ಟೋರಿ’ ಮತ್ತೊಂದು ಉದಾಹರಣೆಯಾಗಿದೆ. 

‘ಮಧ್ಯಕಾಲೀನ ಅವಧಿಯಲ್ಲಿ, ಭಾರತಕ್ಕೆ ಬಂದ ಎಲ್ಲಾ ಯುರೋಪಿಯನ್ ಪ್ರಯಾಣಿಕರು, ಫ್ರಾಂಕೋಯಿಸ್ ಬರ್ನಿಯರ್, ಜೀನ್-ಬ್ಯಾಪ್ಟಿಸ್ಟ್ ಟಾವೆರ್ನಿಯರ್ ಅಥವಾ ಪೀಟರ್ ಮುಂಡಿ, ತಾಜ್ ಮಹಲ್ ಅನ್ನು ಷಹಜಹಾನ್ ನಿರ್ಮಿಸಿದ ಸಮಾಧಿ ಎಂದು ಬಣ್ಣಿಸಿದ್ದಾರೆ, ದೇವಾಲಯವಲ್ಲ’ ಎಂದು ಎಕ್ಸ್‌ನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ.

‘ಎಂಥ ಅವನತಿ @SirPareshRawal. 'OMG' ಯಿಂದ #ನಕಲಿ 'ದಿ ತಾಜ್ ಸ್ಟೋರಿ' ವರೆಗೆ‘ ಎಂದು ಪರೇಶ್ ರಾವಲ್ ಕುರಿತು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

2012ರಲ್ಲಿ ವಿಮರ್ಶಕರ ಮೆಚ್ಚುಗೆ ಪ್ರಶಸ್ತಿ ಪಡೆದ ‘ಓ ಮೈ ಗಾಡ್’ ಅನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ನೆಟ್ಟಿಗರೊಬ್ಬರು, ‘ಅವರು ದೇವರ ವಿರುದ್ಧ ಮೊಕದ್ದಮೆ ಹೂಡುವ ನಾಸ್ತಿಕ ವಕೀಲನ ಪಾತ್ರವನ್ನು ನಿರ್ವಹಿಸಿದ್ದಾರೆ’ ಎಂದಿದ್ದಾರೆ.

‘ಬಿಜೆಪಿ ಮತ್ತು ಚಲನಚಿತ್ರ ನಿರ್ಮಾಪಕರು ‘ದಿ ತಾಜ್ ಸ್ಟೋರಿ’ ಚಿತ್ರದ ಮೂಲಕ ತಮ್ಮ ಕಥೆಯನ್ನು ಪುನಃ ಬರೆಯಲು ಬಯಸಿದ್ದಾರೆ. ಪರಂಪರೆಯನ್ನು ಪ್ರಚಾರವಾಗಿ ಪರಿವರ್ತಿಸುತ್ತಾರೆ. ನೀವು ಮತಗಳನ್ನು ಬಯಸಿದಿರಿ ಎಂದ ಮಾತ್ರಕ್ಕೆ ಇತಿಹಾಸ ಬದಲಾಗುವುದಿಲ್ಲ’ ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

ಪರೇಶ್ ರಾವಲ್ ಅವರು 2014 ರಿಂದ 2019 ರ ಅವಧಿಯಲ್ಲಿ ಅಹಮದಾಬಾದ್ ಪೂರ್ವದ ಬಿಜೆಪಿ ಸಂಸದರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.