ADVERTISEMENT

ತೆಲುಗು ನಟ ಕೃಷ್ಣಂ ರಾಜು ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2022, 8:45 IST
Last Updated 11 ಸೆಪ್ಟೆಂಬರ್ 2022, 8:45 IST
ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣಂ ರಾಜು ಕುಟುಂಬಸ್ಥರ ಜೊತೆ ಪ್ರಧಾನಿ ನರೇಂದ್ರ ಮೋದಿ (ಟ್ವಿಟರ್ ಚಿತ್ರ)
ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣಂ ರಾಜು ಕುಟುಂಬಸ್ಥರ ಜೊತೆ ಪ್ರಧಾನಿ ನರೇಂದ್ರ ಮೋದಿ (ಟ್ವಿಟರ್ ಚಿತ್ರ)   

ಹೈದರಾಬಾದ್: ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣಂ ರಾಜು ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರ ಚಿಕ್ಕಪ್ಪ, 83 ವರ್ಷದ ಕೃಷ್ಣಂ ರಾಜು ಅವರು ಅನಾರೋಗ್ಯದಿಂದ ಇಂದು ಮುಂಜಾನೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

‘ಕೃಷ್ಣಂ ರಾಜು ಅವರ ನಿಧನದಿಂದ ದುಃಖವಾಗಿದೆ. ಮುಂಬರುವ ಪೀಳಿಗೆಯವರು ಅವರ ಸಿನಿಮಾ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಸ್ಮರಿಸುತ್ತಾರೆ. ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಅವರು ರಾಜಕೀಯ ನಾಯಕರಾಗಿ ಛಾಪು ಮೂಡಿಸಿದ್ದರು. ಅವರ ಕುಟುಂಬಸ್ಥರಿಗೆ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಕೃಷ್ಣಂ ರಾಜು ನನಗೆ ತುಂಬಾ ಆತ್ಮೀಯರು. ಮಾಜಿ ಪ್ರಧಾನಿ ವಾಜಪೇಯಿಯವರ ಆಡಳಿತಾವಧಿಯಲ್ಲಿ ಸಚಿವರಾಗಿ ಕೆಲಸ ಮಾಡಿದ ಅವರು ನನ್ನ ಅಪಾರ ಅಭಿಮಾನಿಯಾಗಿದ್ದರು. ಅವರು ಕೈಗೊಂಡ ಹಲವು ಕಾರ್ಯಕ್ರಮಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ವೈಯಕ್ತಿಕವಾಗಿ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿರುವುದು ನೋವಿನ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ’ ಮಾಜಿ ಉಪ‍ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

ಲೋಕಸಭೆ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಕೃಷ್ಣಂ ರಾಜು ಅವರ ನಿಧನ ದುಃಖ ತಂದಿದೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಟ್ವೀಟ್ ಮಾಡಿದ್ದಾರೆ.

ಮಾಜಿ ಕೇಂದ್ರ ಸಚಿವ ಹಾಗೂ ಖ್ಯಾತ ಚಿತ್ರನಟ ‘ರೆಬೆಲ್ ಸ್ಟಾರ್’ ಕೃಷ್ಣಂ ರಾಜು ಅವರ ನಿಧನ ದುಃಖ ತಂದಿದೆ. ನಟರಾಗಿ, ರಾಜಕೀಯ ನಾಯಕರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.