ADVERTISEMENT

ಪವನ್ ಕಲ್ಯಾಣ್ ಹುಟ್ಟಿದ ದಿನದಂದೇ ಪವರ್ ಸ್ಟಾರ್ ರಿಲೀಸ್‌!

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 6:16 IST
Last Updated 3 ಜುಲೈ 2020, 6:16 IST
ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ   

ರಾಮ್‌ ಗೋಪಾಲ್ ವರ್ಮ ನಿರ್ದೇಶನದ ’ಪವರ್‌ ಸ್ಟಾರ್‌’ ಸಿನಿಮಾವು ನಟ ಪವನ್ ಕಲ್ಯಾಣ್ ಹುಟ್ಟಿದ ದಿನದಂದೇ ಬಿಡುಗಡೆಯಾಗಲಿದೆಯಂತೆ. ಕಳೆದ ವಾರವಷ್ಟೇ ಪವರ್‌ ಸ್ಟಾರ್ ಸಿನಿಮಾ ಮಾಡುವುದಾಗಿ ತಿಳಿಸಿದ್ದ ಆರ್‌ಜಿವಿ ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ. ಮುಂದಿನ ವಾರದಿಂದ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಲಿದೆಯಂತೆ.

ಸಿನಿಮಾ ವಿಮರ್ಶೆ, ರೇಟಿಂಗ್‌ ಬಗ್ಗೆ ತಲೆ ಕೆಡಿಸಿಕೊಳ್ಳದೇ ತನ್ನ ಮನಸ್ಸಿಗೆ ಮೆಚ್ಚಿದ ವಿಷಯದ ಮೇಲೆ ಸಿನಿಮಾ ಮಾಡುವುದು ಆರ್‌ಜಿವಿ ಸ್ಟೈಲ್‌. ಈ ಕೊರೊನಾ ಲಾಕ್‌ಡೌನ್‌ ಅವಧಿಯಲ್ಲೂ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡಿ ಡಿಜಿಟಲ್‌ ವೇದಿಕೆ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ‘ನಾನು ಮಾಡುವ ಸಿನಿಮಾಗಳು 10 ಜನ ನೋಡಿದರು ಸಾಕು ನನಗೆ ಲಾಭವಾಗುತ್ತದೆ’ ಎಂದು ಸಂದರ್ಶನಗಳಲ್ಲಿ ದಿಟ್ಟವಾಗಿ ಉತ್ತರಿಸಿದ್ದಾರೆ ಆರ್‌ಜಿವಿ.

ಮೂಲಗಳ ಪ್ರಕಾರ ಒಂದು ತಿಂಗಳಲ್ಲಿ ಪವರ್ ಸ್ಟಾರ್‌ ಚಿತ್ರದ ಸಂಪೂರ್ಣ ಕೆಲಸ ಮುಗಿಸುವ ಯೋಚನೆಯಲ್ಲಿದ್ದಾರಂತೆ ನಿರ್ದೇಶಕ. ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಹೈದರಾಬಾದ್‌ ಹೊರಭಾಗದಲ್ಲಿ ನಡೆಯಲಿದೆಯಂತೆ.

ಸದ್ಯದ ಮಾಹಿತಿಯ ಪ್ರಕಾರ ಪವನ್‌ ಕಲ್ಯಾಣ್ ಹುಟ್ಟಿದ ದಿನವಾದ ಸೆಪ್ಟೆಂಬರ್ 2 ರಂದೇ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪವನ್‌ ಕಲ್ಯಾಣ್ ಪಾತ್ರಕ್ಕೆ ರಾಮ್‌ ಗೋಪಾಲ್ ವರ್ಮಾ ಆಯ್ಕೆ ಮಾಡಿದ್ದ ವ್ಯಕ್ತಿ ಆ ಪಾತ್ರದಲ್ಲಿ ನಟಿಸಲು ಹಿಂಜರಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಮುಂದೇನು? ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.