ಬೆಂಗಳೂರಿನಲ್ಲಿ ಜೂನ್27ರಂದು ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ರವಿಚಂದ್ರನ್ ಹಾಗೂ ಮಾಲಶ್ರೀ ಹಾಡಿಗೆ ಹೆಜ್ಜೆ ಹಾಕಿದರು
ಪ್ರಜಾವಾಣಿ ಚಿತ್ರ
ಪ್ರಣಯರಾಜ ಶ್ರೀನಾಥ ಅವರ ಭಾವುಕ ಮಾತು, ವಿ.ರವಿಚಂದ್ರನ್ ಸಖತ್ ಡಾನ್ಸ್, ಸಾಯಿಕುಮಾರ್ ಖಡಕ್ ಸಂಭಾಷನೆ, ಶಿವರಾಜ್‌ಕುಮಾರ್ ಚುರುಕು ಉತ್ತರಗಳಿಗೆ ಸಾಕ್ಷಿಯಾಗಿದ್ದು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ ಮೂರನೆಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ.
ಚಂದನವನದ ಬಹುತೇಕ ತಾರೆಯರೆಲ್ಲ ಕಾರ್ಯಕ್ರಮದಲ್ಲಿದ್ದರು. ಒಂದಷ್ಟು ಜನಕ್ಕೆ ಪ್ರಶಸ್ತಿ ಪಡೆದ ಖುಷಿ, ಮತ್ತೊಂದಷ್ಟು ಗಣ್ಯರಿಗೆ ಪ್ರಶಸ್ತಿ ನೀಡಿದ ಸಾರ್ಥಕತೆ. ಚಂದನವನದ ತಾರೆಯರ ನೃತ್ಯ, ಕಾಮಿಡಿ ಕಿಲಾಡಿಗಳ ಪ್ರಹಸನ ಎಲ್ಲವಕ್ಕೂ ಈ ವೇದಿಕೆ ಸಾಕ್ಷಿಯಾಗಿತ್ತು.
‘ಪ್ರಜಾವಾಣಿ’ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಜೀವಮಾನದ ಸಾಧನೆ ಪ್ರಶಸ್ತಿಯನ್ನು ‘ಪ್ರಣಯರಾಜ’ ಶ್ರೀನಾಥ್ ಅವರಿಗೆ ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತರಾದ ಶ್ರೀನಾಥ್, ‘ಎಂಜಿನಿಯರ್, ವೈದ್ಯ, ವಕೀಲ ಆಗಬೇಕು ಎಂಬ ಅನೇಕ ಯೋಚನೆಗಳು ಬಾಲ್ಯದಲ್ಲಿ ಬಂದಿದ್ದವು. ಆದರೆ, ನಟನಾಗಬೇಕು ಎಂಬುದು ಅದಮ್ಯ ಬಯಕೆಯಾಗಿತ್ತು. ಸಿನಿಮಾದಲ್ಲಿ ನಟಿಸಬೇಕಿದ್ದರೆ ಮೊದಲು ನಾಟಕದಲ್ಲಿ ಪಾತ್ರ ಮಾಡಬೇಕಿತ್ತು. ನಾನು ಏಳನೇ ವರ್ಷದಲ್ಲಿ ಕಲಾವಿದನಾದೆ. ಮುಂದೆ ನಾಟಕದಿಂದ ಚಲನಚಿತ್ರ ರಂಗಕ್ಕೆ ಕಾಲಿಟ್ಟೆ. 1969ರಿಂದ ಇಲ್ಲಿಯವರೆಗೆ ನಟಿಸುತ್ತಲೇ ಇದ್ದೇನೆ’ ಎಂದು ನೆನಪಿನ ಬುತ್ತಿ ಬಿಚ್ಚಿದರು.
ಕನ್ನಡ ಚಿತ್ರರಂಗದ ಶೋಮ್ಯಾನ್ ಎಂದೇ ಕರೆಸಿಕೊಳ್ಳುವ ವಿ.ರವಿಚಂದ್ರನ್ ‘ಕನ್ನಡ ಸಿನಿ ಧ್ರುವತಾರೆ’ ಪ್ರಶಸ್ತಿ ಪಡೆದರೆ, ಧ್ರುವ ಸರ್ಜಾ ‘ವರ್ಷದ ಅತ್ಯುತ್ತಮ ಸಾಧನೆ’ ಗೌರವಕ್ಕೆ ಪಾತ್ರರಾದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಚಿವರಾದ ರಾಮಲಿಂಗಾ ರೆಡ್ಡಿ, ಮಧು ಬಂಗಾರಪ್ಪ, ಶಿವರಾಜ್ ತಂಗಡಗಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗಿಯಾದರು.
ಬೆಂಗಳೂರಿನಲ್ಲಿ ಜೂನ್27ರಂದು ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮ
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ ಮೂರನೆಯ ಆವೃತ್ತಿ ಕನ್ನಡದ ನಂಬರ್ ಒನ್ ಮನರಂಜನಾ ವಾಹಿನಿಯಾಗಿರುವ ಜೀ ಕನ್ನಡದಲ್ಲಿ ಇದೇ ಭಾನುವಾರ (ಜು.20) ಸಂಜೆ 4 ಗಂಟೆಯಿಂದ ಪ್ರಸಾರಗೊಳ್ಳಲಿದೆ. ಜುಲೈ 27 ರಂದು ಬೆಳಿಗ್ಗೆ 11 ಗಂಟೆಯಿಂದ ಕಾರ್ಯಕ್ರಮದ ಮರುಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.