ನಟಿ ಪ್ರೀತಿ ಜಿಂಟಾ
ನವದೆಹಲಿ: 'ದೇವಸ್ಥಾನಕ್ಕೆ ಭೇಟಿ ನೀಡುವ ಅರ್ಥ ರಾಜಕೀಯಕ್ಕೆ ಪ್ರವೇಶಿಸುವುದು ಎಂದಲ್ಲ' ಎಂದ ನಟಿ ಪ್ರೀತಿ ಜಿಂಟಾ, ರಾಜಕೀಯ ಪ್ರವೇಶದ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಜಿಂಟಾ ಉತ್ತರಿಸಿದ್ದಾರೆ.
ಇತ್ತೀಚೆಗೆ ಮಹಾ ಕುಂಭಮೇಳದಲ್ಲಿ ಜಿಂಟಾ ಪವಿತ್ರ ಸ್ನಾನ ಮಾಡಿದ್ದರು. ಮಹಾಶಿವರಾತ್ರಿಯಂದು ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಬೆಳವಣಿಗೆಗಳ ನಡುವೆ ಪ್ರೀತಿ ಜಿಂಟಾ ರಾಜಕೀಯಕ್ಕೆ ಧುಮುಕಲಿದ್ದಾರೆ, ಬಿಜೆಪಿಗೆ ಸೇರಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.
'ಸಾಮಾಜಿಕ ಮಾಧ್ಯಮದಲ್ಲಿರುವವರ ಸಮಸ್ಯೆ ಇದೇ ಆಗಿದೆ. ಅವರೇ ಎಲ್ಲವನ್ನು ನಿರ್ಣಯಿಸುವವರಾಗುತ್ತಿದ್ದಾರೆ' ಎಂದು ಜಿಂಟಾ ಬೇಸರ ವ್ಯಕ್ತಪಡಿಸಿದ್ದಾರೆ.
'ದೇವಸ್ಥಾನ ಅಥವಾ ಮಹಾ ಕುಂಭಕ್ಕೆ ಹೋಗಿ ಬಂದದ್ದು, ನಾನು ಭಾರತೀಯಳು ಎಂಬುವುದರ ಬಗ್ಗೆ ಹೆಮ್ಮೆಪಡುವ ವಿಷಯವಾಗಿದೆ. ತಾಯ್ನಾಡಿನಿಂದ ದೂರವಿರುವ ಕಾರಣ ನನ್ನ ದೇಶಕ್ಕೆ ಬಂದ ವೇಳೆ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಎಲ್ಲರಂತೆ ನಾನು ಭಾರತ ಮತ್ತು ಅದರ ಮೌಲ್ಯಗಳನ್ನು ಹೆಚ್ಚು ಇಷ್ಟಪಡುತ್ತೇನೆ. ಇದರ ಅರ್ಥ ಬಿಜೆಪಿಗೆ ಸೇರುತ್ತೇನೆ ಎಂದಲ್ಲ' ಎಂದು ಜಿಂಟಾ ತಿಳಿಸಿದ್ದಾರೆ.
'ನನ್ನ ಪತಿ ನಾಸ್ತಿಕರಾಗಿರುವುದರಿಂದ ನಾವು ನಮ್ಮ ಮಕ್ಕಳನ್ನು ಹಿಂದೂಗಳಾಗಿ ಬೆಳೆಸುತ್ತಿದ್ದೇವೆ. ನೋವಿನ ಸಂಗತಿ ಏನೆಂದರೆ ನಾನು ಸದಾ ಟೀಕೆಗಳನ್ನು ಎದುರಿಸುತ್ತಿದ್ದೇನೆ. ನನ್ನ ಮಕ್ಕಳಿಗೆ ಹಿಂದು ಧರ್ಮದ ಬೇರುಗಳ ಬಗ್ಗೆ ತಿಳಿಸಲು ಹೆಮ್ಮೆ ಪಡುತ್ತೇನೆ' ಎಂದು ಜಿಂಟಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.