
ಅದ್ವಿಕ್, ಸಾತ್ವಿಕಾ ಜೋಡಿಯಾಗಿ ನಟಿಸುತ್ತಿರುವ ‘ಪ್ರೇಮಿ’ ಚಿತ್ರದ ಮೊದಲ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಎಸ್. ಪ್ರದೀಪ್ ವರ್ಮ ನಿರ್ದೇಶನದ ಚಿತ್ರಕ್ಕೆ ಗುರು ಕರಿಬಸವೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಬಿ.ಸಿದ್ದಲಿಂಗಯ್ಯ ಬಂಡವಾಳ ಹೂಡಿದ್ದಾರೆ.
‘ಮನಸ್ಸು ಏನೋ ಕಾಡಿದೆ’ ಎಂಬ ಗೀತೆಗೆ ನಿರ್ದೇಶಕರೇ ಸಂಗೀತ ನೀಡಿದ್ದು, ನಿಖಿಲ್ ರಾಜ್ ಶೆಟ್ಟಿ ಸಾಹಿತ್ಯವಿದೆ. ಚೇತನ್ ಗಂಧರ್ವ ಹಾಡಿದ್ದಾರೆ. ನಾಯಕ ಅದ್ವಿಕ್ ಅವರ ತಾಯಿಯೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ಮಗನಿಗಾಗಿ ತಂದೆ ಚಿತ್ರವನ್ನು ನಿರ್ಮಿಸಿದ್ದಾರೆ.
‘ನೈಜ ಕಥೆ ಆಧರಿಸಿದ ಈ ಚಿತ್ರ ಪ್ರೇಮ ಕಥಾಹಂದರ ಹೊಂದಿದೆ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಜ್ಯೋತಿಷ್ಯದ ಕುರಿತಾದ ವಿಷಯವೂ ಇದರಲ್ಲಿದೆ. ಐದು ಹಾಡುಗಳ ಪೈಕಿ ಮೊದಲ ಹಾಡು ಇಂದು ಬಿಡುಗಡೆಯಾಗಿದೆ. ನಿರ್ದೇಶನ, ಸಂಗೀತ ನಿರ್ದೇಶನದ ಜತೆ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದೇನೆ’ ಎಂದರು ನಿರ್ದೇಶಕ.
‘ಬಾಲ್ಯದಿಂದಲೂ ನಟನಾಗಬೇಕೆಂಬ ಕನಸಿತ್ತು. ಅದು ಈಗ ಈಡೇರಿದೆ. ಹೆತ್ತವರು ನನ್ನ ಕನಸನ್ನು ನನಸಾಗಿಸಿದ್ದಾರೆ. ಸದ್ಯದಲ್ಲೇ ಬಾಕಿಯಿರುವ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಅನಾವರಣವಾಗಲಿದೆ’ ಎಂದರು ನಾಯಕ ಅದ್ವಿಕ್.
ಗೌತಮ್ ಮಟ್ಟಿ ಛಾಯಾಚಿತ್ರಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಶೋಭಿತ, ದ್ವಿತ ಕೆ. ಗೌಡ, ಸುರೇಶ್, ರಾಘವೇಂದ್ರ ಮುಂತಾದವರು ಚಿತ್ರದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.