
ಹೇಮಂತ್ ಎಂ.ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ನಾಯಕಿಯಾಗಿ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಡಾಲಿ ಧನಂಜಯಗೆ ಪ್ರಿಯಾಂಕಾ ಜೋಡಿಯಾಗಲಿದ್ದಾರೆ.
ಶಿವರಾಜ್‌ಕುಮಾರ್, ಧನಂಜಯ ನಟನೆಯ ಚಿತ್ರದ ಎರಡು ಹಂತಗಳ ಚಿತ್ರೀಕರಣ ಮುಗಿದಿದ್ದು, ಮೂರನೆ ಹಂತಕ್ಕೆ ಸಿದ್ಧತೆ ನಡೆದಿದೆ. ಪೋಸ್ಟರ್ ಹಾಗೂ ಫಸ್ಟ್‌ಲುಕ್‌ಗಳಿಂದ ಈ ಚಿತ್ರ ಗಮನ ಸೆಳೆದಿತ್ತು.
ಪವರ್ ಸ್ಟಾರ್ ಪವನ್ ಕಲ್ಯಾಣ್, ನಾನಿ, ಧನುಷ್ ಹಾಗೂ ಶಿವಕಾರ್ತಿಕೇಯನ್ ಜೊತೆ ಅಭಿನಯಿಸಿರುವ ಪ್ರಿಯಾಂಕಾ, 80ರ ದಶಕದ ಬಾಂಡ್- ಸ್ಪೈ ಕಥೆ ಹೊಂದಿರುವ ಈ ಚಿತ್ರತಂಡ ಸೇರ್ಪಡೆಗೊಂಡಿದ್ದಾರೆ.
ತೆಲುಗಿನ ‘ಗ್ಯಾಂಗ್‌ಲೀಡರ್’, ‘ಸರಿಪೋದ ಶನಿವಾರಂ’, ತಮಿಳಿನ ‘ಡಾಕ್ಟರ್’, ‘ಕ್ಯಾಪ್ಟನ್ ಮಿಲ್ಲರ್’ ಮುಂತಾದ ಸಿನಿಮಾಗಳಲ್ಲಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ.
‘ನಾನು ಶಿವರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ತಂಡದ ಭಾಗವಾಗುವ ನನ್ನ ಕನಸು ನನಸಾಗಿದೆ. ಧನಂಜಯ, ಹೇಮಂತ್ ರಾವ್ ಅವರ ಜತೆ ಕೆಲಸ ಮಾಡುವ ಅವಕಾಶ ಇಷ್ಟು ಬೇಗ ಸಿಗುತ್ತದೆ ಎಂದುಕೊಂಡಿರಲಿಲ್ಲ’ ಎಂದಿದ್ದಾರೆ ಪ್ರಿಯಾಂಕಾ.
ಡಾ. ವೈಶಾಕ್ ಜೆ. ಗೌಡ ಅವರು ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.