ADVERTISEMENT

ಕಿಚ್ಚ ಸುದೀಪ್‌ ನಟನೆಯ ‘ಕೋಟಿಗೊಬ್ಬ’ ಸರಣಿ ಮುಂದುವರಿಯಲಿವೆ: ಸೂರಪ್ಪ ಬಾಬು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 12:29 IST
Last Updated 9 ಮಾರ್ಚ್ 2020, 12:29 IST
   
"ಸೂರಪ್ಪ ಬಾಬು"

ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ ಚಿತ್ರಗಳ ಸರಣಿಗಳನ್ನು ನಾಲ್ಕು, ಐದು ಹಾಗೂ ಆರರವರೆಗೂ ಮುಂದುವರಿಸಿಕೊಂಡು ಹೋಗುವ ಯೋಜನೆ ಇದೆ. ಕನ್ನಡದಲ್ಲಿ ಹೀಗೆ ಸರಣಿ ಚಿತ್ರಗಳು ಬಂದಿರಲಿಲ್ಲ. ಇಂತಹ ಸಾಧನೆ ಮಾಡುವುದು ನಮ್ಮ ಚಿತ್ರ ತಂಡದ ಕನಸು. ಈ ನಿಟ್ಟಿನಲ್ಲಿ ಉತ್ಸುಕರಾಗಿದ್ದೇವೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

ಚಿತ್ರದಲ್ಲಿ ನಾಲ್ಕು ಅದ್ದೂರಿ ಹಾಡುಗಳಿದ್ದು, ಧ್ವನಿ ಸುರುಳಿಯನ್ನು ತಿಂಗಳ ಕೊನೆಯಲ್ಲಿ ದೊಡ್ಡಮಟ್ಟದಲ್ಲಿಬಿಡುಗಡೆ ಮಾಡಲಾಗುವುದು. ಏಪ್ರಿಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಬರ್ಟ್’, ‘ಪೊಗರು’ ಚಿತ್ರಗಳ ನಿರ್ಮಾಪಕರು ಹಾಗೂ ನಾನು ಪರಸ್ಪರ ಚರ್ಚಿಸಿಯೇ ಸಿನಿಮಾಗಳನ್ನು ಬಿಡುಗಡೆ ಮಾಡುತ್ತೇವೆ. ನಿರ್ಮಾಪಕರೆಂದರೆ ನಾವೆಲ್ಲರೂ ಒಂದೇ, ಚಿತ್ರ ಬಿಡುಗಡೆ ದಿನಾಂಕ ಸಂಬಂಧ ನಾವು ಸಂಘರ್ಷ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ನಾಯಕ, ಕೇರಳದ ಬೆಡಗಿ ಮಡೋನ್ನಾ ಸೆಬಾಸ್ಟಿಯನ್‌ ನಾಯಕಿ. ತಾರಾಗಣದಲ್ಲಿಬಾಲಿವುಡ್‌ನ ಸುಧಾಂಶು ಪಾಂಡೆ, ಅಫ್ತಾಪ್‌ ಶಿವದಾಸನಿ, ಶ್ರದ್ಧಾ ದಾಸ್‌ನಟಿಸಿದ್ದಾರೆ. ಕನ್ನಡತಿ ಆಶಿಕಾ ರಂಗನಾಥ್ ಒಂದು ಹಾಡಿಗೆ ಡಾನ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ಶಿವ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಟೀಸರ್‌ ಪುನಾ ಕಾಣಿಸಲಿದೆ
ಯುಟ್ಯೂಬ್‌ ಚಾನೆಲ್‌ನಿಂದ ‘ಕೋಟಿಗೊಬ್ಬ 3’ ಸಿನಿಮಾದ ಟೀಸರ್‌ ಮಾಯವಾಗಿದ್ದ ಬಗ್ಗೆ ಪ್ರತಿಕ್ರಿಯಿಸಿದ ಬಾಬು,ಆಡಿಯೊ ವಿಡಿಯೊ ಹಕ್ಕು ಆನಂದ್ ಆಡಿಯೊ ಸಂಸ್ಥೆ ಪಡೆದುಕೊಂಡಿದೆ. ಈ ಸಮಸ್ಯೆಯನ್ನು ಅವರೇ ನೋಡಿಕೊಳ್ಳಲಿದ್ದಾರೆ. ಚಿತ್ರದ ಟೀಸರ್ ಯೂಟ್ಯೂಬ್‌ನಲ್ಲಿ ಪುನಾ ಕಾಣಿಸಿಕೊಳ್ಳಲಿದೆ ಎನ್ನುವ ನಿರೀಕ್ಷೆ ನಮ್ಮದು ಎಂದರು.

ಕೋಟಿಗೊಬ್ಬ-3 ಚಿತ್ರದ ವಿರುದ್ಧ ಅಜಯ್ ಪಾಲ್ ಕಂಪನಿಯು ಕಾಪಿರೈಟ್ ಉಲ್ಲಂಘನೆ ಸಂಬಂಧ ದೂರು ನೀಡಿದ್ದರಿಂದ ಚಿತ್ರದ ಟೀಸರ್ ಅನ್ನು ಯೂಟ್ಯೂಬ್‌ನಿಂದಡಿಲೀಟ್ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಏನಿದು ವಿವಾದ
ಪೋಲೆಂಡ್‌ನಲ್ಲಿ ಕೋಟಿಗೊಬ್ಬ 3 ಚಿತ್ರೀಕರಣಕ್ಕೆ ಮುಂಬೈ ಮೂಲದ ವೈಬ್ರಂಟ್ ಲಿಮಿಟೆಡ್ ಕಂಪನಿ ಉಸ್ತುವಾರಿ ವಹಿಸಿಕೊಂಡಿತ್ತು. ಚಿತ್ರತಂಡವು ಚಿತ್ರೀಕರಣ ಸಂಬಂಧ ₹88 ಲಕ್ಷ ವಂಚಿಸಿದೆ ಎಂದು ಕಂಪನಿ ಮಾಲೀಕರು ಪೋಲೆಂಡ್‌ ರಾಯಭಾರ ಕಚೇರಿಯಲ್ಲಿ ನಿರ್ಮಾಪಕ ಸೂರಪ್ಪ ಬಾಬು ಹಾಗೂ ರಾಮ್‌ಬಾಬು ಪ್ರೊಡಕ್ಷನ್ಸ್ ವಿರುದ್ಧ ದೂರು ನೀಡಿದ್ದರು. ಅಲ್ಲದೆ ಪೋಲೆಂಡ್‌ಚಿತ್ರೀಕರಣದ ಹಕ್ಕು ತಮ್ಮ ಕಂಪನಿ ಹೆಸರಿನಲ್ಲಿದೆ. ಬಾಕಿ ಹಣ ಪಾವತಿಸುವವರೆಗೂ ಅದನ್ನು ಹಿಂತಿರುಗಿಸುವುದಿಲ್ಲ. ಸಿನಿಮಾ ಬಿಡುಗಡೆಯಾದರೂ ಕಾನೂನು ಹೋರಾಟ ಮಾಡುವುದಾಗಿ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದರು.

ಸೂರಪ್ಪ ಬಾಬು

ಮಾತುಕತೆಗೆ ಬರಲಿ
‘ಪೋಲೆಂಡ್ ಸರ್ಕಾರ ಮತ್ತು ಅಲ್ಲಿನ ರಾಯಭಾರ ಕಚೇರಿಯ ಕಮಿಷನರ್ ಅನುಮತಿ ಪಡೆದೇ ಶೂಟಿಂಗ್ ನಡೆಸಿದ್ದೇವೆ. ಹೀಗಿರುವಾಗ ಕಾಪಿರೈಟ್ ಹೇಗೆ ಉಲ್ಲಂಘನೆಯಾಗಲಿದೆ. ಈಗ ಬ್ಲಾಕ್ ಮೇಲ್ ಮಾಡುತ್ತಿರುವವರು ಮೊದಲು ₹90 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈಗ ₹45 ಲಕ್ಷಕ್ಕೆ ಬೇಡಿಕೆ ಇಡುತ್ತಿದ್ದಾರೆ. ಅವರ ಬಳಿ ಇರುವ ದಾಖಲೆಯ ಜತೆಗೆ ಮಾತುಕತೆಗೆ ಬರಲಿ’ ಎಂದು ಸೂರಪ್ಪ್ ಬಾಬು ಹೇಳಿದರು.

ನಟ ಸುದೀಪ್‌ ಈ ವಿವಾದದ ಬಗ್ಗೆ ಏನು ಸ್ಪಷ್ಟನೆ ಕೊಡಬೇಕೊ ಅದನ್ನು ಈಗಾಗಲೇ ಟ್ವಿಟರ್‌ನಲ್ಲಿ ಕೊಟ್ಟಿದ್ದಾರೆ. ಚಿತ್ರಕ್ಕೆ ಯಾವತ್ತೂ ತೊಂದರೆಯಾಗಲು ಸುದೀಪ್‌ ಬಿಡುವುದಿಲ್ಲ. ನನ್ನ ಮತ್ತು ಅವರ ನಡುವೆ ಸಂಬಂಧ ಚೆನ್ನಾಗಿದೆ. ಹಾಗಿಲ್ಲದಿದ್ದರೆ ಅವರು ನನ್ನ ಜತೆಗೆ ಸಿನಿಮಾ ಮಾಡುತ್ತಿರಲಿಲ್ಲ ಎಂದರು.

ಎಲ್ಲಿದೆ ಕೋವಿಡ್ 19?
ದೇಶದಲ್ಲಿ ಕೋವಿಡ್ 19ಎಲ್ಲಿದೆ? ಇದೆಲ್ಲ ಪುಕಾರು. ಈವರೆಗೆ ಯಾರೂ ಸಹ ಕೋವಿಡ್ 19ಕ್ಕೆ ತುತ್ತಾಗಿರುವುದು ದೇಶದಲ್ಲಿ ದೃಢಪಟ್ಟಿಲ್ಲ. ಈಗಲೇ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ, ಇನ್ನು ಮಂತ್ರಿ ಸ್ಕ್ವೇರ್, ಒರಾಯನ್ ಮಾಲ್‌ನಂತಹ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಖಾಲಿ ಬೀಳುವಂತೆ ಮಾಡುವುದು ಬೇಡ ಎಂದು ಬಾಬು ಮನವಿ ಮಾಡಿದರು.

ವಾಣಿಜ್ಯ ಮಂಡಳಿ ಸ್ನೇಹಿತರು ಕೋವಿಡ್ 19 ಕಾರಣಕ್ಕೆ‌ ಒಂದು ತಿಂಗಳು ಚಿತ್ರಗಳನ್ನು‌ ಮುಂದೂಡುವಂತೆ ಮನವಿ ಮಾಡಿದ್ದಾರೆ. ಇದರಲ್ಲಿಸದುದ್ದೇಶ ಇರಬಹುದು, ಹಾಗೆಯೇ ನಾವು ಫೈನಾನ್ಷಿಯರ್‌ಗಳಿಂದ ತಂದಿರುವ ಸಾಲಕ್ಕೆ ಅವರು ಒಂದು ತಿಂಗಳ ಬಡ್ಡಿ ಪಾವತಿಸಿ ಪುಣ್ಯಕಟ್ಟಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.