
ನಟ ದಿ. ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ಮಾರಿಗಲ್ಲು' ವೆಬ್ ಸೀರಿಸ್‌ನ ಟ್ರೈಲರ್ ಅ. 23ರಂದು ಬಿಡುಗಡೆಯಾಗಿದೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕದಂಬರ ಕಾಲದ ಕಥೆಯನ್ನು ಆಧರಿಸಿ ಈ ವೆಬ್ ಸೀರಿಸ್ ನಿರ್ಮಾಣವಾಗಿದ್ದು, ಪುನೀತ್ ರಾಜಕುಮಾರ್ ಅವರನ್ನು ಮತ್ತೆ ತೆರೆಯ ಮೇಲೆ ತರುವ ಪ್ರಯತ್ನ ಮಾಡಲಾಗಿದೆ. ತಂತ್ರಜ್ಞಾನದ ಮೂಲಕ ಪುನೀತ್ ರಾಜಕುಮಾರ್ ಪಾತ್ರವನ್ನು ಮರುಸೃಷ್ಟಿಸಲಾಗಿದೆ. ಈ ವೆಬ್ ಸೀರಿಸ್ ಇದೇ ಅಕ್ಟೋಬರ್ 31ರಿಂದ ಜೀ5 ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ.
ಈ ವೆಬ್ ಸರಣಿಯಲ್ಲಿ ಕದಂಬ ವಂಶದ ಸ್ಥಾಪಕ ಹಾಗೂ ಕನ್ನಡದ ಮೊದಲ ರಾಜ ಮಯೂರ ಶರ್ಮಾ ಪಾತ್ರವಿದೆ. ವಿಶೇಷವೆಂದರೆ, ಆ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ.
‘ಮಾರಿಗಲ್ಲು’ನಲ್ಲಿ ಅಪ್ಪು ನಟನೆ ಇರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಥೆ ಇದರಲ್ಲಿ ಇರಲಿದೆ. ಕದಂಬರ ಪ್ರಥಮ ರಾಜ ಮಯೂರ ಶರ್ಮನ ಪರಂಪರೆಯನ್ನು ತಿಳಿಸುತ್ತದೆ. ಕದಂಬರ ಕಾಲದ ನಿಧಿಯನ್ನು ಹುಡುಕಲು ಹೊರಟ ಶಿರಸಿ ಯುವಕರ ಕಹಾನಿಯನ್ನು ಇದರಲ್ಲಿ ತೋರಿಸಲಾಗಿದೆ.
ಶಿರಸಿಯ ಬೇಡರ ವೇಷ ಈ ವೆಬ್ ಸೀರೀಸ್ನ ವಿಶೇಷತೆಗಳಲ್ಲಿ ಒಂದಾಗಿದೆ ಎಂದು ತಂಡ ಹೇಳಿಕೊಂಡಿದೆ. ಇದರಲ್ಲಿ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಪ್ರವೀಣ್ ತೇಜ್, ಎ.ಎಸ್. ಸೂರಜ್, ಪ್ರಶಾಂತ್ ಸಿದ್ದಿ, ನಿನಾದ ಹೃತ್ಸಾ ಮುಂತಾದವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.