ರಜನಿಕಾಂತ್
(ಪಿಟಿಐ ಚಿತ್ರ)
ಚೆನ್ನೈ: ಸೂಪರ್ ಸ್ಟಾರ್ ಖ್ಯಾತಿಯ ನಟ ರಜನಿಕಾಂತ್ ಚಿತ್ರರಂಗಕ್ಕೆ ಕಾಲಿರಿಸಿ 50 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ.
1975ರ ಆಗಸ್ಟ್ 14ರಂದು ರಜನಿಕಾಂತ್ ಅಭಿನಯದ ಅವರ ಮೊದಲ ಸಿನಿಮಾ 'ಅಪೂರ್ವ ರಾಗಂಗಳ್' ಬಿಡುಗೆಯಾಗಿತ್ತು. ರಜನಿಕಾಂತ್ ಅವರ ಸಿನಿ ಪಯಣ ಈಗ 50 ವರ್ಷ ಪೊರೈಸಿದೆ.
ಈ ಸಂದರ್ಭದಲ್ಲಿ ನಟ ರಜನಿಕಾಂತ್ ಅವರಿಗೆ ಕಮಲ್ ಹಾಸನ್ ಸೇರಿದಂತೆ ತಾರೆಯರು ಶುಭ ಹಾರೈಸಿದ್ದಾರೆ. ರಜನಿ ಅವರ ಜೊತೆಗಿನ ಅಪರೂಪದ ಚಿತ್ರವನ್ನು ಕಮಲ್ ಹಂಚಿಕೊಂಡಿದ್ದಾರೆ.
'ಸಿನಿಮಾ ರಂಗದಲ್ಲಿ ಅರ್ಧ ಶತಮಾನ ಪೂರೈಸಿದ ನನ್ನ ಆತ್ಮೀಯ ಗೆಳೆಯ ರಜನಿಕಾಂತ್ ಚಿತ್ರರಂಗದಲ್ಲಿ 50 ಅದ್ಭುತ ವರ್ಷಗಳ ಸಂಭ್ರಮದಲ್ಲಿದ್ದಾರೆ. ಅತ್ಯಂತ ಪ್ರೀತಿ ಹಾಗೂ ಮೆಚ್ಚುಗೆಯಿಂದ ಈ ಸಂಭ್ರಮವನ್ನು ಆಚರಿಸುತ್ತೇನೆ. ಈ ಸುವರ್ಣ ಮಹೋತ್ಸವಕ್ಕೆ ತಕ್ಕಂತೆ ಕೂಲಿ ಜಾಗತಿಕ ಯಶಸ್ಸನ್ನು ಗಳಿಸಲಿ' ಎಂದು ಹಾರೈಸಿದ್ದಾರೆ.
50ನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾವು ತೆರೆಗೆ ಅಪ್ಪಳಿಸುತ್ತಿದೆ. ಮುಂಗಡ ಬುಕ್ಕಿಂಗ್‌ನಲ್ಲಿ ಚಿತ್ರವು ಈಗಾಗಲೇ ದಾಖಲೆ ಬರೆದಿದ್ದು, ಹೆಚ್ಚಿನ ನಿರೀಕ್ಷೆಯನ್ನು ಉಂಟು ಮಾಡಿದೆ.
ಲೋಕೇಶ್ ಕನಗರಾಜ್ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ತೆಲುಗು ನಟ ನಾಗಾರ್ಜುನ, ಕನ್ನಡದ ನಟ ಉಪೇಂದ್ರ, ಮಳಯಾಳದ ಸೌಭಿನ್, ಸೇರಿದಂತೆ ಪ್ರಮುಖರು ನಟಿಸಿದ್ದಾರೆ.
ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಹೆಚ್ಚಿನ ಜನಪ್ರಿಯತೆ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.