ಕೃಪೆ: ಸನ್ ಪಿಕ್ಚರ್ಸ್
ಬೆಂಗಳೂರು: ಲೋಕೇಶ್ ಕನಗರಾಜ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರ ವಿಶ್ವದಾದ್ಯಂತ ₹400 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಈ ಸಂಬಂಧ ನಿರ್ಮಾಣ ಸಂಸ್ಥೆ ಸನ್ ಪಿಚ್ಚರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ.
ಬಿಡುಗಡೆಯಾದ ಮೊದಲ ದಿನ ₹150 ಕೋಟಿಗೂ ಅಧಿಕ ಗಳಿಕೆ ಕಂಡ 'ಕೂಲಿ', ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ ₹404 ಕೋಟಿ ಗಳಿಸಿದ ಮೊದಲ ತಮಿಳು ಸಿನಿಮಾ ಎಂದು ಸನ್ ಪಿಚ್ಚರ್ ಪೋಸ್ಟ್‌ನಲ್ಲಿ ತಿಳಿಸಿದೆ.
ಇದರೊಂದಿಗೆ ಅಧಿಕೃತವಾಗಿ ರಜನಿಕಾಂತ್ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ 'ಕೂಲಿ'ಯೂ ಒಂದಾಗಿದೆ.
2018ರಲ್ಲಿ ಬಿಡುಗಡೆಯಾದ 2.0 ಚಿತ್ರ ₹691 ಕೋಟಿ ಗಳಿಕೆ ಕಂಡಿತ್ತು. 2023ರಲ್ಲಿ ತೆರೆ ಕಂಡ ಜೈಲರ್ ₹ 604.5 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಕೂಲಿ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ.
ಆಗಸ್ಟ್ 14ರಂದು ಕೂಲಿ ಚಿತ್ರವು ಹಾಗೂ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ವಾರ್ 2 ಚಿತ್ರ ಬಿಡುಗಡೆಯಾಗಿತ್ತು. ಹೀಗಾಗಿ ಬಾಕ್ಸ್ ಆಫೀಸ್‌ನಲ್ಲಿ ಎರಡು ಸಿನಿಮಾಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು.
ಕೂಲಿ ಚಿತ್ರದಲ್ಲಿ ದೇವ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಜನಿಕಾಂತ್ ಬರೋಬ್ಬರಿ ₹200 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಅಮೀರ್‌ಖಾನ್, ನಾಗಾರ್ಜುನ, ಉಪೇಂದ್ರ , ಶ್ರುತಿ ಹಾಸನ್, ರಚಿತರಾಮ್ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದ್ದು, ‘ಚಿಟಿಕು’ ಎಂಬ ಹಾಡು ಸಾಕಷ್ಟು ಸದ್ದು ಮಾಡಿದೆ. ‘ಮೊನಿಕಾ’ ಹಾಡು ಎಲ್ಲೆಡೆ ಹರಿದಾಡುತ್ತಿದೆ. ನಟಿ ಪೂಜಾ ಹೆಗ್ಡೆ ಹಾಗೂ ಮಲಯಾಳ ನಟ ಸೋಭಿನ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.