ADVERTISEMENT

ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಟಿಕೆಟ್ ದರ ₹2,000!

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 0:11 IST
Last Updated 12 ಆಗಸ್ಟ್ 2025, 0:11 IST
ಕೂಲಿ 
ಕೂಲಿ    

ತಮಿಳು ಹಾಗೂ ತೆಲುಗು ಭಾಷೆಯ ಬಿಗ್‌ ಬಜೆಟ್‌ ಸಿನಿಮಾಗಳು ಕರ್ನಾಟಕದಲ್ಲಿ ತೆರೆಕಂಡಾಗ ಅವುಗಳ ಟಿಕೆಟ್‌ ದರ ದುಬಾರಿಯಾಗುವುದು ಹೊಸದೇನಲ್ಲ. ರಜನಿಕಾಂತ್‌ ನಟನೆಯ, ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಕೂಲಿ’ ಸಿನಿಮಾ ಆ.14ರಂದು ತೆರೆಕಾಣುತ್ತಿದ್ದು, ಬೆಂಗಳೂರಿನಲ್ಲಿ ಈ ಸಿನಿಮಾದ ಟಿಕೆಟ್‌ ದರ ಗರಿಷ್ಠ ₹2 ಸಾವಿರ ತಲುಪಿದೆ.

ರಾಜ್ಯದ ಎಲ್ಲಾ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ ದರವನ್ನು ಗರಿಷ್ಠ ₹200ಕ್ಕೆ ನಿಗದಿಗೊಳಿಸಿ ಸರ್ಕಾರ ಕರಡು ಆದೇಶ ಹೊರಡಿಸಿದೆ. ಇದಾದ ಬಳಿಕ ಬರುತ್ತಿರುವ ಮೊದಲ ಬಿಗ್‌ ಬಜೆಟ್‌ ಸಿನಿಮಾ ಇದಾಗಿದೆ. ರಾಜಧಾನಿಯಲ್ಲೇ ಸುಮಾರು 63 ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಸಿನಿಮಾ ತೆರೆಕಾಣುತ್ತಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6.30ರಿಂದಲೇ ಶೋಗಳು ಆರಂಭವಾಗುತ್ತಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ 10 ರಿಂದ 16 ಶೋಗಳನ್ನು ‘ಕೂಲಿ’ಗೆ ನೀಡಲಾಗಿದೆ. ಇವುಗಳಲ್ಲಿ ಕನಿಷ್ಠ ₹400 ರಿಂದ ₹1000ರವರೆಗೆ ಟಿಕೆಟ್‌ ದರವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು ಎಂ. ಅವರ ಚಿತ್ರಮಂದಿರದಲ್ಲಿ ಮೊದಲ ಶೋನ ಗರಿಷ್ಠ ಬೆಲೆ ₹800 ನಿಗದಿಯಾಗಿದೆ. ಹಲವು ಥಿಯೇಟರ್‌ಗಳಲ್ಲಿ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಕೇವಲ ಎಂಟು ಚಿತ್ರಮಂದಿರಗಳಲ್ಲಿ ಕನ್ನಡದಲ್ಲಿ ಡಬ್‌ ಆದ ಸಿನಿಮಾದ 18 ಪ್ರದರ್ಶನವಿದೆ. ನಾಲ್ಕು ಚಿತ್ರಮಂದಿರಗಳಲ್ಲಿ ತೆಲುಗಿನಲ್ಲಿ ಡಬ್‌ ಆದ ಸಿನಿಮಾ ಪ್ರದರ್ಶನ ಕಾಣುತ್ತಿದೆ. 

‘ಕೂಲಿ’ಯ ಆಗಮನದ ನಡುವೆಯೂ ಕನ್ನಡದ ‘ಸು ಫ್ರಮ್‌ ಸೋ’ ಮೂರನೇ ವಾರದ ಬಳಿಕವೂ ಸುಮಾರು 20 ಚಿತ್ರಮಂದಿರಗಳನ್ನು ಉಳಿಸಿಕೊಂಡಿದೆ. ಆ.9–10ರಂದು ‘ಸು ಫ್ರಮ್‌ ಸೋ’ನ 1.56 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಕರ್ನಾಟಕದಲ್ಲೇ ಸುಮಾರು ₹50 ಕೋಟಿ ಕಲೆಕ್ಷನ್‌ ಮಾಡಿರುವ ಈ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾದ ಬಳಿಕ ಮಲಯಾಳ, ತೆಲುಗಿನಲ್ಲೂ ಬಿಡುಗಡೆಯಾಗಿದೆ. ಹೀಗಾಗಿ ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ಹೊಸ ದಾಖಲೆ ನಿರ್ಮಿಸುವುದಕ್ಕೂ ಸಜ್ಜಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.