ರಾಖಿ ಸಾವಂತ್ ಮತ್ತು ದೋಡಿ ಖಾನ್
ಮುಂಬೈ: ನಟಿ ರಾಖಿ ಸಾವಂತ್ ಅವರು ಮೂರನೇ ಮದುವೆಗೆ ಸಿದ್ದತೆ ನಡೆಸುತ್ತಿದ್ದು, ಪಾಕಿಸ್ತಾನದ ನಟ ದೋಡಿ ಖಾನ್ ಅವರನ್ನು ವರಿಸಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಸುದ್ದಿ ಸಂಸ್ಥೆ ನ್ಯೂಸ್ 18 ಜೊತೆಗಿನ ಸಂದರ್ಶನದಲ್ಲಿ ದೋಡಿ ಖಾನ್ ಅವರನ್ನು ಪ್ರೀತಿಸುತ್ತಿರುವುದಾಗಿ ರಾಖಿ ಹೇಳಿಕೊಂಡಿದ್ದರು. ಸದ್ಯದಲ್ಲೇ ಮದುವೆಯಾಗುವುದಾಗಿಯೂ ತಿಳಿಸಿದ್ದರು.
ಇದೇ ವೇಳೆ ಮಾಜಿ ಪತಿ ಅದಿಲ್ ದುರಾನಿ ಅವರನ್ನು ಕಟುವಾಗಿ ಟೀಕಿಸಿದ್ದ ರಾಖಿ, ತಮ್ಮ ಬಗ್ಗೆ ಅದಿಲ್ ಸುಳ್ಳು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎಂದೂ ಆರೋಪಿಸಿದ್ದರು.
‘ಅದಿಲ್‌ಗೆ ನನ್ನ ಮದುವೆಯ ಬಗ್ಗೆ ಹೊಟ್ಟೆಕಿಚ್ಚಿದ್ದು, ಅದಕ್ಕಾಗಿ ನನ್ನ ಬಗ್ಗೆ ತಪ್ಪು ಮಾಹಿತಿ ಹಂಚಿಕೊಳ್ಳುತ್ತಿದ್ದಾನೆ. ಅಂತಹ ಮೂರ್ಖನಿಗೆ ಪ್ರಚಾರದ ವಸ್ತುವಾಗಲು ನಾನು ಸಿದ್ಧಳಿಲ್ಲ’ ಎಂದು ಹೇಳಿದ್ದರು.
2022ರಲ್ಲಿ ಅದಿಲ್ ದುರಾನಿ ಮತ್ತು ರಾಖಿ ಸಾವಂತ್ ವಿವಾಹವಾಗಿದ್ದರು. ವಿವಾಹೇತರ ಸಂಬಂಧ ಸೇರಿದಂತೆ ಅದಿಲ್ ವಿರುದ್ಧ ರಾಖಿ ಹಲವಾರು ಆರೋಪಗಳನ್ನು ಮಾಡಿದ ನಂತರ 2023ರಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು.
2023ರ ಫೆಬ್ರುವರಿ 7ರಂದು ವರದಕ್ಷಿಣೆ ಕಿರುಕುಳ ಪ್ರಕರಣದಡಿ ಅದಿಲ್ ಖಾನ್ ಬಂಧನವಾಗಿದ್ದು, ಐದು ತಿಂಗಳ ನಂತರ ಬಿಡುಗಡೆಗೊಂಡಿದ್ದರು.
ಇದಕ್ಕೂ ಮೊದಲು ರಾಖಿ ಸಾವಂತ್ ರಿತೇಶ್ ರಾಜ್ ಸಿಂಗ್ ಅವರನ್ನು ವರಿಸಿದ್ದರು. ಹಿಂದಿ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಇಬ್ಬರು, ಶೋ ಮುಗಿಯುವ ಹಂತಕ್ಕೆ ವಿಚ್ಛೇದನ ಪಡೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.