ADVERTISEMENT

ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದವರಿಗೆ ₹1 ಕೋಟಿ ಬಹುಮಾನ: ಏನಿದು ವಿವಾದ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2023, 13:49 IST
Last Updated 27 ಡಿಸೆಂಬರ್ 2023, 13:49 IST
<div class="paragraphs"><p>ರಾಮ್‌ ಗೋಪಾಲ್‌ ವರ್ಮಾ</p></div>

ರಾಮ್‌ ಗೋಪಾಲ್‌ ವರ್ಮಾ

   

ಹೈದರಾಬಾದ್: ಟಾಲಿವುಡ್‌ನಲ್ಲಿ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್‌ ಗೋಪಾಲ್‌ ವರ್ಮಾ (ಆರ್‌ಜಿವಿ) ಅವರು ಇದೀಗ ‘ವ್ಯೂಹಂ’ ಚಿತ್ರದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಅಮರಾವತಿ ಚಳವಳಿಯ ನಾಯಕ ಕೊಲಿಕಿ ಪುಡಿ ಶ್ರೀನಿವಾಸರಾವ್ ಅವರು, ರಾಮ್‌ ಗೋಪಾಲ್‌ ವರ್ಮಾ ಅವರ ತಲೆಯನ್ನು ಕತ್ತರಿಸಿ ತಂದವರಿಗೆ ₹1 ಕೋಟಿ ಬಹುಮಾನ ನೀಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ADVERTISEMENT

‘ರಾಮ ಗೋಪಾಲ್ ವರ್ಮಾ ಅವರು ಸಮಾಜಕ್ಕೆ ಮಾರಕ. ಸಮಾಜಕ್ಕಿಂತ ದೊಡ್ಡದು ಯಾವುದೂ ಇಲ್ಲ’ ಎಂದು ಶ್ರೀನಿವಾಸರಾವ್ ಹೇಳಿದ್ದರು. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇದರ ಬೆನ್ನಲ್ಲೇ ಶ್ರೀನಿವಾಸರಾವ್ ಹೇಳಿಕೆ ಕುರಿತು ‘ಎಕ್ಸ್‌’ನಲ್ಲಿ (ಟ್ವಿಟರ್‌) ಪ್ರತಿಕ್ರಿಯಿಸಿದ ರಾಮ್ ಗೋಪಾಲ್ ವರ್ಮಾ, ಟಿವಿ ವಾಹಿನಿ ಚರ್ಚೆಯ ವೇಳೆ ಶ್ರೀನಿವಾಸರಾವ್ ಮಾತನಾಡಿರುವ ವಿಡಿಯೊ ತುಣುಕನ್ನು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಶ್ರೀನಿವಾಸರಾವ್ ನನ್ನನ್ನು ಕೊಲ್ಲಲು ₹1 ಕೋಟಿಗೆ ಗುತ್ತಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸರಾವ್, ಸುದ್ದಿ ವಾಹಿನಿಯ ಆ್ಯಂಕರ್ ಸಾಂಬಶಿವರಾವ್ ಮತ್ತು ಚಾನೆಲ್ ಮಾಲೀಕ ಬಿ.ಆರ್. ನಾಯ್ಡು ಅವರ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಆರ್‌ಜಿವಿ ತಿಳಿಸಿದ್ದಾರೆ.

‘ವ್ಯೂಹಂ’ ಚಿತ್ರದ ವಿವಾದ

ಆರ್‌ಜಿವಿ ನಿರ್ದೇಶನದ ‘ವ್ಯೂಹಂ’ ಸಿನಿಮಾದಲ್ಲಿ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಅವಮಾನಿಸುವ ರೀತಿಯಲ್ಲಿ ತೋರಿಸಲಾಗಿದೆ ಎಂದು ಟಿಡಿಪಿ ಮತ್ತು ಜನಸೇನಾ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾ ಇದೇ ತಿಂಗಳ 29ಕ್ಕೆ (ಶುಕ್ರವಾರ) ಬಿಡುಗಡೆಯಾಗಲಿದೆ ಎಂದು ಆರ್‌ಜಿವಿ ಘೋಷಿಸಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷದ ನಾಯಕರು ಆರ್‌ಜಿವಿ ಬೆನ್ನಿಗೆ ನಿಂತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಎಲ್ಲಾ ಸಚಿವರು ಭಾಗವಹಿಸಿದ್ದರು.

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಆಡಳಿತಾರೂಢ ವೈಎಸ್‌ಆರ್‌ಸಿಪಿ, ಟಿಡಿಪಿ –ಜನಸೇನಾ ನಡುವೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.