ADVERTISEMENT

‘ಮರ್ದಾನಿ–2’ರಲ್ಲೂ ರಾಣಿ ಖಾಕಿ ಖದರ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 19:30 IST
Last Updated 27 ನವೆಂಬರ್ 2019, 19:30 IST
ಮರ್ದಾನಿ2 ಚಿತ್ರದಲ್ಲಿ ರಾಣಿ ಮುಖರ್ಜಿ
ಮರ್ದಾನಿ2 ಚಿತ್ರದಲ್ಲಿ ರಾಣಿ ಮುಖರ್ಜಿ   

ರಾಣಿ ಮುಖರ್ಜೀ ಅವರ ‘ಮರ್ದಾನಿ 2’ ಅದ್ಭುತ ಕಥೆಯ ಟ್ರೇಲರ್‌ ಮನ ಸೆಳೆಯುತ್ತಿದೆ. ಅತ್ಯಾಚಾರಿಗಳ ವಿರುದ್ಧ ಮಹಿಳಾ ಪೊಲೀಸ್‌ ಅಧಿಕಾರಿ ಸಮರ ಸಾರುವ ಕತೆಯುಳ್ಳ ಈ ಥ್ರಿಲ್ಲರ್‌ ಸಿನಿಮಾಪ್ರೇಕ್ಷಕರನ್ನು ಸೀಟಿನ ಅಂಚಿಗೆ ತಂದು ಕೂರಿಸುತ್ತದೆ. ದೇಶದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತರ ಹಿಂಸಾತ್ಮಕ ಅಪರಾಧಗಳ ಜಗತ್ತನ್ನು ತೆರೆದಿಡುತ್ತದೆ.

ವ್ಯವಸ್ಥಿತವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡ ನಡೆಸುವ ಭಯಾನಕ ಸರಣಿ ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನು ಹಿಡಿಯಲು ಮಹಿಳಾ ಅಧಿಕಾರಿ ಸಮಯದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ. ದಿಟ್ಟ ಮಹಿಳಾ ಪೊಲೀಸ್‌ ಅಧಿಕಾರಿ ಶಿವಾನಿ ಶಿವಾಜಿ ರಾಯ್‌ ಪಾತ್ರದಲ್ಲಿ ರಾಣಿ ಮುಖರ್ಜಿನಟಿಸಿದ್ದಾರೆ.ಮಕ್ಕಳ ಕಳ್ಳಸಾಗಣೆಯ ಕಿಂಗ್‌ಪಿನ್ ಅನ್ನು ಮಟ್ಟ ಹಾಕುವ ಪೊಲೀಸ್‌ ಅಧಿಕಾರಿಯಾಗಿರಾಣಿ ಮರ್ದಾನಿ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದರು.

ದೇಶವನ್ನು ಬೆಚ್ಚಿ ಬೀಳಿಸಿದ ಮುಂಬೈನ ಶಕ್ತಿ ಮಿಲ್ಸ್ ಅತ್ಯಾಚಾರ ಪ್ರಕರಣಈ ಚಿತ್ರಕ್ಕೆ ಸ್ಫೂರ್ತಿ. 2013ರಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಂತ ಕ್ರೂರವಾಗಿ ಅತ್ಯಾಚಾರವೆಸಗಿದ ಐವರು ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರು ಎನ್ನುವುದು ಗಮನಿಸಬೇಕಾದ ಅಂಶ.

ADVERTISEMENT

ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಿಸಲಾಗಿದೆ. ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಹೀನ ಕೃತ್ಯಗಳಿಗೆ ಈ ಚಿತ್ರ ಕೈಗನ್ನಡಿಯಾಗಲಿದೆ ಎಂದುಚಿತ್ರದ ನಿರ್ದೇಶಕ ಗೋಪಿಪುತ್ರನ್‌ ಬಣ್ಣಿಸಿದ್ದಾರೆ.

ದೇಶದಲ್ಲಿ ಮಹಿಳೆಯರ ವಿರುದ್ಧ ಅಪ್ರಾಪ್ತರು ಎಸಗುವ ಅಪರಾಧಗಳ ಕುರಿತು ಅಧ್ಯಯನ ಮತ್ತು ಸಂಶೋಧನೆಗೆ ಸಾಕಷ್ಟು ಸಮಯ ಕಳೆದಿರುವುದಾಗಿ ಗೋಪಿಪುತ್ರನ್‌ ಹೇಳಿದ್ದಾರೆ. ಯಮುನಾ ಎಕ್ಸ್‌ಪ್ರೆಸ್‌ ವೇ ಪ್ರಕರಣದಿಂದ ಶಕ್ತಿ ಮಿಲ್ಸ್ ಪ್ರಕರಣದವರೆಗಿನ ಹಲವು ಘಟನೆಗಳು ಮರ್ದಾನಿ– 2 ಚಿತ್ರದ ಕಥೆಯಾಗಿವೆ. ಇದು ವಾಸ್ತವಕ್ಕೆ ಹತ್ತಿರವಾದ ಚಿತ್ರ. ಹೀಗಾಗಿ ದೇಶದಲ್ಲಿ ನಡೆದ ವಾಸ್ತವ ಘಟನೆಗಳಿಗೆ ಸಾಕಷ್ಟು ಹೋಲಿಕೆ ಇದೆ ಎಂದು ಹೇಳಿದ್ದಾರೆ. ಹೋಲಿಕೆಯಾದರೆ ತಾವು ಜವಾಬ್ದಾರರಲ್ಲ ಎಂದು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ರಾಣಿ ಮುಖರ್ಜಿ ಪತಿ ಆದಿತ್ಯ ಛೋಪ್ರಾ ಈ ಚಿತ್ರ ನಿರ್ಮಿಸಿದ್ದಾರೆ. ‘ಹಿಚ್ಕಿ’ ನಂತರ ರಾಣಿ ನಟಿಸುತ್ತಿರುವ ಚಿತ್ರ ಇದಾಗಿದ್ದು ಡಿಸೆಂಬರ್ 13ರಂದು ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.