ADVERTISEMENT

ಗರ್ಭಪಾತವನ್ನು ಪ್ರಮೋಷನ್ ಗಿಮಿಕ್‌ ಎನ್ನುತ್ತಾರೋ ಎಂಬ ಭಯವಿತ್ತು: ರಾಣಿ ಮುಖರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2023, 11:15 IST
Last Updated 12 ಆಗಸ್ಟ್ 2023, 11:15 IST
ರಾಣಿ ಮುಖರ್ಜಿ (ಸಂಗ್ರಹ ಚಿತ್ರ)
ರಾಣಿ ಮುಖರ್ಜಿ (ಸಂಗ್ರಹ ಚಿತ್ರ)   

ಮುಂಬೈ: ವೈಯಕ್ತಿಕ ಜೀವನದ ಆಘಾತಗಳು ಮತ್ತು ಅದನ್ನು ಪ್ರಮೋಷನ್‌ ಗಿಮಿಕ್ (ತಂತ್ರ) ಎಂದು ಹೇಳುವ ಜಾಯಮಾನದ ಬಗ್ಗೆ ಬಾಲಿವುಡ್ ನಟಿ ರಾಣಿ ಮುಖರ್ಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಮೋಷನ್‌ ಗಿಮಿಕ್‌ ಭಯಕ್ಕೆ ಎರಡು ವರ್ಷದ ಹಿಂದೆ ತಮಗಾದ ಗರ್ಭಪಾತದ ವಿಷಯವನ್ನು ಬಹಿರಂಗಪಡಿಸಲು ಹೆದರಿರುವುದಾಗಿ ಹೇಳಿಕೊಂಡಿದ್ದಾರೆ.

2020ರಲ್ಲಿ ‘ಮಿಸೆಸ್‌ ಚಟರ್ಜಿ ವರ್ಸಸ್‌ ನಾರ್ವೆ’ ಚಿತ್ರದ ಚಿತ್ರೀಕರಣ ನಡೆಯುತಿತ್ತು. ಐದು ತಿಂಗಳ ಗರ್ಭಿಣಿಯಾಗಿದ್ದ ರಾಣಿ ಮುಖರ್ಜಿ ಅವರಿಗೆ ಇದೇ ಸಂದರ್ಭ ಗರ್ಭಪಾತವಾಗಿತ್ತು. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಅವರಿಗೆ ಇದೊಂದು ದೊಡ್ಡ ಆಘಾತವಾಗಿತ್ತು. ಆದರೆ ಈ ವಿಷಯವನ್ನು ಬಹಿರಂಗಪಡಿಸಲು ಹಿಂದೇಟು ಹಾಕಿರುವುದಾಗಿ ಮುಖರ್ಜಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮೆಲ್ಬರ್ನ್‌ನಲ್ಲಿ ನಡೆದ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಾತನಾಡಿದ ರಾಣಿ ಮುಖರ್ಜಿ, ಜೀವನದ ಅತ್ಯಂತ ಸಂಕಷ್ಟದ ವಿಚಾರವನ್ನು ಹಂಚಿಕೊಂಡರು ಅದು ಪ್ರಚಾರ ಎಂಬಂತೆ ಬಿಂಬಿತವಾಗುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಬಹುಶಃ ಇದೇ ಮೊದಲ ಬಾರಿಗೆ ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಿದ್ದೇನೆ. 2020ರಲ್ಲಿ ‘ಮಿಸೆಸ್‌ ಚಟರ್ಜಿ ವರ್ಸಸ್‌ ನಾರ್ವೆ’ ಚಿತ್ರೀಕರಣದ ವೇಳೆ ನನಗೆ ಗರ್ಭಪಾತವಾಗಿತ್ತು. ಆಗ ನಾನು ಐದು ತಿಂಗಳ ಗರ್ಭಿಣಿ. ಈ ವಿಷಯವನ್ನು ನಾನು ಈಗ ಹೇಳುತ್ತಿದ್ದೇನೆ. ಒಂದು ವೇಳೆ ನಾನು ಆಗಲೇ ಹೇಳಿದ್ದರೆ ಇದು ಪ್ರಮೋಷನ್ ತಂತ್ರ ಎಂದು ಹೇಳುತ್ತಾರೋ ಎಂಬ ಭಯ ನನ್ನಲ್ಲಿತ್ತು. ಅದಕ್ಕೆ ನಾನು ಬಹಿರಂಗವಾಗಿ ಈ ವಿಷಯದ ಬಗ್ಗೆ ಮಾತನಾಡಿರಲಿಲ್ಲ‘ ಎಂದರು.

2014ರಲ್ಲಿ ಆದಿತ್ಯ ಚೋಪ್ರಾ ಅವರನ್ನು ರಾಣಿ ಮುಖರ್ಜಿ ವರಿಸಿದ್ದರು. ದಂಪತಿಗೆ ಅಧಿರಾ ಎಂಬ ಮಗಳಿದ್ದಾಳೆ. ‘ಎರಡು ತಿಂಗಳ ಮುಂಚಿತವಾಗಿ ಮಗಳು ಹುಟ್ಟಿದ್ದು, ಐಸಿಯುನಲ್ಲಿಟ್ಟು ಅವಳನ್ನು ಬದುಕಿಸಿದ್ದೇವು’ ಎಂದು ಶೋವೊಂದರಲ್ಲಿ ರಾಣಿ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.