ನಟ ಅಲ್ಲು ಅರ್ಜುನ್
ಹೈದರಾಬಾದ್: ಹೈದರಾಬಾದ್‌ನ ಸಂದ್ಯಾ ಚಿತ್ರಮಂದಿರದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರಿಗೆ ರೆಗ್ಯುಲರ್ ಜಾಮೀನು ಮಂಜೂರಾಗಿದೆ.
ಹೈದರಾಬಾದ್‌ನ ನಾಂಪಲ್ಲಿಯ 2ನೇ ಹೆಚ್ಚುವರಿ ಮೆಟ್ರೊಪಾಲಿಟಿನ್ ಸೆಷನ್ ನ್ಯಾಯಾಲಯದ ನ್ಯಾಯಾದೀಶರು, ವಾದ–ಪ್ರತಿವಾದಗಳನ್ನು ಆಲಿಸಿ ನಿಯಮಿತ ಜಾಮೀನು ಮಂಜೂರು ಮಾಡಿ ಆದೇಶಿಸಿದರು.
ಅಲ್ಲು ಅರ್ಜುನ್ ಪರ ಅವರ ವಕೀಲ ಅಶೋಕ್ ರೆಡ್ಡಿ ವಾದಿಸಿದರು. ₹50,000 ಬಾಂಡ್‌ನ ತಲಾ ಇಬ್ಬರ ಶ್ಯೂರಿಟಿಗಳನ್ನು ಒದಗಿಸಲು ಜಡ್ಜ್ ಆದೇಶಿಸಿದ್ದಾರೆ.
ಅಲ್ಲದೇ, ಅಲ್ಲು ಅರ್ಜುನ್ ಅವರು ಇದೇ ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂದು ಆದೇಶಿಸಿದ್ದಾರೆ. ಸದ್ಯ ಅವರು ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಹೈದರಾಬಾದ್‌ನಲ್ಲಿ ಡಿ.4ರಂದು ಪುಷ್ಪ–2 ಪ್ರೀಮಿಯರ್ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಮೃತಪಟ್ಟಿದ್ದು, ಆಕೆಯ ಎಂಟು ವರ್ಷದ ಮಗ ಗಾಯಗೊಂಡಿದ್ದ. ಹೈದರಾಬಾದ್‌ನಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ ಘಟನೆ ನಡೆದಿತ್ತು.
ಈ ಸಂಬಂಧ ಮೃತ ಮಹಿಳೆಯ ಕುಟುಂಬ ಸದಸ್ಯರು ಡಿ.5 ರಂದು ಚಿತ್ರಮಂದಿರದ ಆಡಳಿತ ಮಂಡಳಿ, ಅಲ್ಲು ಅರ್ಜುನ್ ಹಾಗೂ ಅವರ ಭದ್ರತಾ ತಂಡದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಪೊಲೀಸರು ಮೂವರನ್ನು ಬಂಧಿಸಿದ್ದರು.
ಅಲ್ಲು ಅರ್ಜುನ್ ಅವರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ತೆಲಂಗಾಣ ಪೊಲೀಸರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.