ADVERTISEMENT

ಹಾರರ್ ಚಿತ್ರ ಮಾಡಲು ನಿರ್ದೇಶಕ ದೆವ್ವವಾಗಬೇಕೇ?: ರಾಜಮೌಳಿ ಬೆನ್ನಿಗೆ ನಿಂತ RGV

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2025, 15:53 IST
Last Updated 21 ನವೆಂಬರ್ 2025, 15:53 IST
   

ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹನುಮಂತನ ಕುರಿತು ನಿರ್ದೇಶಕ ಎಸ್.ಎಸ್. ರಾಜಮೌಳಿ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಡಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ಎಲ್ಲ ಬೆಳವಣಿಗಳ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್‌ಜಿವಿ), ರಾಜಮೌಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದಲ್ಲಿ ನಾಸ್ತಿಕನಾಗಿರುವುದು ಅಪರಾಧವಲ್ಲ ಎಂದಿದ್ದಾರೆ.

ದೇಶದಲ್ಲಿ (ಭಾರತ) ನಾಸ್ತಿಕನಾಗಿರುವುದು ಅಪರಾಧ ಅಲ್ಲ ಎಂಬುದನ್ನು ರಾಜಮೌಳಿ ಮೇಲೆ ವಿಷಕಾರುತ್ತಿರುವ ಆಸ್ತಿಕರು ತಿಳಿದುಕೊಳ್ಳಬೇಕು. ಸಂವಿಧಾನದ 25ನೇ ವಿಧಿಯು ನಾಸ್ತಿಕರ ಹಕ್ಕನ್ನು ರಕ್ಷಿಸುತ್ತದೆ ಎಂದಿದ್ದಾರೆ.

ADVERTISEMENT

ದೇವರನ್ನು ನಂಬದೇ ಇರುವ ರಾಜಮೌಳಿ ದೇವರ ಬಗ್ಗೆ ಯಾಕೆ ಸಿನಿಮಾ ಮಾಡಬೇಕು ಎಂದು ಕೆಲವರು ಪ್ರಶ್ನಿಸಿದ್ದಾರೆ. ಆ ಮೂರ್ಖ ವಾದಕ್ಕೆ ಉತ್ತರಿಸುವುದಾದರೆ, ಗ್ಯಾಂಗ್‌ಸ್ಟರ್ ಸಿನಿಮಾ ಮಾಡಲು ಗ್ಯಾಂಗ್‌ಸ್ಟರ್ ಆಗಬೇಕೇ?, ಹಾರರ್ ಸಿನಿಮಾ ಮಾಡಲು ದೆವ್ವವಾಗಬೇಕೇ? ಎಂದು ಪ್ರಶ್ನಿಸಿದ್ದಾರೆ.

ರಾಜಮೌಳಿ ಅವರು ದೇವರನ್ನು ನಂಬದಿದ್ದರೂ, ದೇವರು ಅವರಿಗೆ 100 ಪಟ್ಟು ಹೆಚ್ಚು ಸಂಪತ್ತು ಮತ್ತು ಅಪಾರ ಅಭಿಮಾನಿಗಳನ್ನು ನೀಡಿದ್ದಾರೆ. ಬಹುತೇಕ ಭಕ್ತರು ನೂರು ಜನ್ಮದಲ್ಲಿ ಕೂಡ ಇದನ್ನು ಪಡೆಯಲು ಅಸಾಧ್ಯ. ಹಾಗಾದರೆ ದೇವರು ಭಕ್ತರಿಗಿಂತ ನಾಸ್ತಿಕರನ್ನು ಹೆಚ್ಚು ಪ್ರೀತಿಸುತ್ತಾನೆ. ಅಥವಾ ಯಾರು ನಂಬುತ್ತಾರೆ ಯಾರು ನಂಬಲ್ಲ ಎಂಬುದನ್ನು ದೇವರು ಪಟ್ಟಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ರಾಜಮೌಳಿ ಬಗ್ಗೆ ದೇವರಿಗೇ ಸಮಸ್ಯೆ ಇಲ್ಲ ಎಂದ ಮೇಲೆ, ಸ್ವಯಂ ನಿಯೋಜಿತ ದೇವರ ದಲ್ಲಾಳಿಗಳು ಯಾಕೆ ರಕ್ತಡೊತ್ತಡ(ಬಿಪಿ), ಅಲ್ಸರ್ ಬರಿಸಿಕೊಳ್ಳುತ್ತಿದ್ದಾರೆ. ದೇವರನ್ನು ನಂಬದೇ ಇರುವುದು ಇವರಿಗೆ ನಿಜವಾದ ಸಮಸ್ಯೆ ಅಲ್ಲ. ದೇವರನ್ನು ನಂಬದೆಯೇ ರಾಜಮೌಳಿ ಯಶಸ್ಸು ಕಂಡರು ಎಂಬುದು ಇವರಿಗೆ ಇರುವ ನಿಜವಾದ ಸಮಸ್ಯೆ. ಹುಚ್ಚನಂತೆ ಪ್ರಾರ್ಥಿಸಿದರೂ ಕೂಡ ಹೀನಾಯವಾಗಿ ಸೋತಿರುವವರಿಗೆ ಇದು ಭಯ ಹುಟ್ಟಿಸಿದೆ ಎಂದು ಅವರು ಕುಟುಕಿದ್ದಾರೆ.

ರಾಜಮೌಳಿ ಹೇಳಿದ್ದೇನು?

ಇತ್ತೀಚೆಗೆ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನಡೆದ ವಾರಾಣಸಿ ಚಿತ್ರದ ಟೈಟಲ್‌ ಲಾಂಚ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜಮೌಳಿ, ನನಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದರು.

ಇದು ನನಗೊಂದು ಭಾವನಾತ್ಮಕ ಸಂದರ್ಭ ನೆನಪಿದೆ. ಹನುಮಂತ ನನ್ನ ಹಿಂದೆ ನಿಂತು ನೋಡಿಕೊಳ್ಳುತ್ತಾನೆ ಎಂದು ನನ್ನ ತಂದೆ ಹೇಳಿದ್ದರು. ಹಿಂದೆ ನಿಂತು ನನ್ನನ್ನು ನೋಡಿಕೊಳ್ಳಲು ಹೇಗೆ ಸಾಧ್ಯ ಎಂದು ಯೋಚಿಸಿ ತಂದೆ ಮೇಲೆ ಕೋಪಗೊಂಡೆ ಎಂದಿದ್ದರು.

ಹಿಂದೂಪರ ಸಂಘಟನೆಗಳಿಂದ ದೂರು:

ಹನುಮಂತನನ್ನು ನಂಬುವುದಿಲ್ಲ ಎಂದು ಹೇಳುವ ಮೂಲಕ ರಾಜಮೌಳಿ ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಾನರ ಸೇನಾ ಸಂಘಟನೆ ಹೈದರಾಬಾದ್‌ನ ಸರೂರ್‌ ನಗರ ಪೊಲೀಸ್ ಠಾಣೆಯಲ್ಲಿ (ನವೆಂಬರ್ 18) ದೂರು ದಾಖಲಿಸಿದೆ.

ಕಾರ್ಯಕ್ರಮದಲ್ಲಿ ನಟ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.