
ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘ಜೈ ಹನುಮಾನ್’ ಚಿತ್ರ ಭಾನುವಾರ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರದ ತೆಲುಗಿನಲ್ಲಿ ಸಿದ್ಧಗೊಳ್ಳುತ್ತಿದ್ದು, ರಿಷಬ್ ಅವರ ಮೊದಲ ತೆಲುಗು ಸಿನಿಮಾ ಇದಾಗಿದೆ.
‘ಕಾಂತಾರ ಅಧ್ಯಾಯ–1’ ಬಿಡುಗಡೆಗೂ ಮುನ್ನ ರಿಷಬ್ ಒಪ್ಪಿಕೊಂಡಿದ್ದ ಚಿತ್ರವಿದು. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ ಎಂದಿದೆ ಚಿತ್ರತಂಡ.
ಪ್ರಶಾಂತ್ ವರ್ಮಾ ನಿರ್ದೇಶನದ, ಸೂಪರ್ ಹೀರೊ ಪರಿಕಲ್ಪನೆಯ ‘ಹನುಮಾನ್’ ಚಿತ್ರ ಸೂಪರ್ ಹಿಟ್ ಆಗಿತ್ತು. ‘ಅದೇ ರೀತಿಯ ಕಥೆಯನ್ನು ಈ ಚಿತ್ರ ಕೂಡ ಹೊಂದಿರಲಿದೆ. ರಾಣಾ ದಗ್ಗುಬಾಟಿ ಕೂಡ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ’ ಎಂದಿವೆ ಮೂಲಗಳು.
‘ಕಾಂತಾರ’ ಯಶಸ್ಸಿನ ಬಳಿಕ ರಿಷಬ್ ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ. ಬಾಲಿವುಡ್‌ನ ‘ಛತ್ರಪತಿ ಶಿವಾಜಿ’ ಚಿತ್ರದಲ್ಲಿಯೂ ರಿಷಬ್ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಯುವ ನಿರ್ದೇಶಕ ಅಶ್ವಿನ್ ಗಂಗರಾಜು ರಿಷಬ್ ಅವರ ಎರಡನೇ ತೆಲುಗು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.