ADVERTISEMENT

ಆರ್‌ಆರ್‌ಆರ್ ಸಿನಿಮಾ; ಪ್ರೀ ರಿಲೀಸ್ ಇವೆಂಟ್‌ಗೆ ಚಿಕ್ಕಬಳ್ಳಾಪುರದಲ್ಲಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 12:52 IST
Last Updated 14 ಮಾರ್ಚ್ 2022, 12:52 IST
‘ಆರ್‌ಆರ್‌ಆರ್’ ಸಿನಿಮಾ ಪೋಸ್ಟರ್‌
‘ಆರ್‌ಆರ್‌ಆರ್’ ಸಿನಿಮಾ ಪೋಸ್ಟರ್‌   

ಚಿಕ್ಕಬಳ್ಳಾಪುರ: ಎಸ್‌.ಎಸ್.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್‌ಆರ್‌ಆರ್’ (ರೌದ್ರಂ, ರಣಂ, ರುಧಿರಂ) ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ ಮಾ.19ರಂದು ಚಿಕ್ಕಬಳ್ಳಾಪುರ ನಗರದ ಹೊರವಲಯದ ಚೊಕ್ಕಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 7ರ ಬಳಿ ನಡೆಯಲಿದೆ.

ಸುಮಾರು 100 ಎಕರೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮೈದಾನ ಸಿದ್ಧಗೊಳಿಸುವ ಕೆಲಸಗಳು ಭರಾಟೆಯಿಂದ ನಡೆದಿವೆ. 8 ಜೆಸಿಬಿಗಳ ಮೂಲಕ ಜಮೀನು ಸಮತಟ್ಟು ಮಾಡಲಾಗಿದೆ. ಕಳೆದ 10 ದಿನಗಳಿಂದ ಕೆಲಸಗಳು ಸಾಗಿವೆ. ಆರೇಳು ಕ್ಯಾಂಟರ್‌ಗಳ ಮೂಲಕ ಶಾಮಿಯಾನಗಳನ್ನು ತರಲಾಗಿದೆ.

ವಿಶ್ವದಾದ್ಯಂತ 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಆರ್‌ಆರ್‌ಆರ್’ ಮಾ.25ರಂದು ತೆರೆ ಕಾಣುತ್ತಿದೆ. ರಾಜ್ಯದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ADVERTISEMENT

ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಸುಮಾರು 2.5 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎರಡೂವರೆ ಸಾವಿರ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುವುದು. ಈ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು. ಟಿಕೆಟ್ ಮೊತ್ತ ಎಷ್ಟು ಎನ್ನುವುದು ಮಂಗಳವಾರ (ಮಾ.15) ತಿಳಿಯಲಿದೆ ಎಂದು ರಾಜ್ಯದಲ್ಲಿ ಚಿತ್ರ ವಿತರಣೆಯ ಹಕ್ಕು ಪಡೆದಿರುವ ಕೆವಿಎನ್‌ ಪ್ರೊಡಕ್ಷನ್‌ ಹೌಸ್‌ನ ಸುಪ್ರಿತ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಕ್ರಮ ನಡೆಯುವ ಸ್ಥಳದ ಎಡ ಮತ್ತು ಬಲ ಬದಿ ಬೃಹತ್ ಎಲ್‌ಇಡಿ ಪರದೆಗಳು ಎಲೆ ಎತ್ತಲಿವೆ. 52 ಸಾವಿರ ಚದುರ ಅಡಿಯ ಎಲ್‌ಇಡಿ ಪರದೆ ಹಾಗೂ 42 ಬೃಹತ್ ಲೇಸರ್‌ ಲೈಟ್‌ಗಳನ್ನು ಒಳಗೊಂಡ ವೇದಿಕೆ ನಿರ್ಮಾಣವಾಗಲಿದೆ.

ಚಿಕ್ಕಬಳ್ಳಾಪುರದಲ್ಲಿ ನಡೆಯುವ ಈ ಪ್ರೀ ರಿಲೀಸ್ ಇವೆಂಟ್‌ ಸಿನಿಮಾಕ್ಕೆ ಸಂಬಂಧಿಸಿದ ಅತ್ಯಂತ ದೊಡ್ಡ ಕಾರ್ಯಕ್ರಮವಾಗಿದೆ. ದುಬೈನಲ್ಲಿ ಚಿತ್ರತಂಡ ಸಣ್ಣ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಿದೆ. ಅದನ್ನು ಹೊರತುಪಡಿಸಿದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಕಾರ್ಯಕ್ರಮ ನಡೆಯುತ್ತದೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ.

ಮಾ.19ರಂದು ಬೆಳಿಗ್ಗೆ 10ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಕಾರಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ಹೋಟೆಲ್‌ನಲ್ಲಿ ಚಿತ್ರ ತಂಡವು ಮಾಧ್ಯಮಗಳೊಂದಿಗೆ ಸಂವಾದ ನಡೆಸಲಿದೆ. ಸಂಜೆ 6.30ರಿಂದ 9.30ರವರೆಗೆ ಪ್ರೀ ರಿಲೀಸ್ ಇವೆಂಟ್‌ ನಡೆಯಲಿದೆ.

www.kvnproductions.co.in ಮೂಲಕ ಅಭಿಮಾನಿಗಳು ಉಚಿತವಾಗಿ ಪಾಸ್‌ಗಳನ್ನು ಪಡೆಯಬಹುದು. ಅತಿಗಣ್ಯರು ಮತ್ತು ಗಣ್ಯರು in.bookmyshow.comನಲ್ಲಿ ಪಾಸ್‌ಗಳನ್ನು ಪಡೆಯಬಹುದು.

ಕಾರ್ಯಕ್ರಮ ನಡೆಯುವ ಸ್ಥಳ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 25 ಕಿ.ಮೀ ದೂರದಲ್ಲಿದೆ. ಕಾರ್ಯಕ್ರಮಕ್ಕೆ ಅಗತ್ಯವಾದ ವಿಶಾಲ ಸ್ಥಳ ಸಹ ಇಲ್ಲಿ ದೊರೆತಿದೆ. ಈ ಎಲ್ಲ ದೃಷ್ಟಿಯಿಂದ ಆರ್‌ಆರ್‌ಆರ್ ಚಿತ್ರತಂಡ ಇಲ್ಲಿ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ.

1920ರಲ್ಲಿನ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಐತಿಹಾಸಿಕ ಕಥಾಹಂದರ ಈ ಚಿತ್ರದ್ದು. ಆರು ಭಾಷೆಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಜ್ಯೂನಿಯರ್ ಎನ್‌ಟಿಆರ್, ರಾಮ್‌ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮತ್ತಿತರರ ಅದ್ಧೂರಿ ತಾರಾಗಣ ಚಿತ್ರಕ್ಕಿದೆ.

ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ನಟ ಶಿವರಾಜ್ ಕುಮಾರ್ ಹಾಗೂ ಆರ್‌ಆರ್‌ಆರ್ ಚಿತ್ರ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ತೆಲುಗು ನಟರಾದ ಚಿರಂಜೀವಿ ಮತ್ತು ನಂದಮೂರಿ ಬಾಲಕೃಷ್ಣ ಅವರೂ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.