ADVERTISEMENT

RRR Press Meet: ಪುನೀತ್ ಇಲ್ಲ ಎಂದೆನಿಸುವುದಿಲ್ಲ- ನಟ ಜೂನಿಯರ್ ಎನ್‌ಟಿಆರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2022, 13:04 IST
Last Updated 19 ಮಾರ್ಚ್ 2022, 13:04 IST
RRR ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ದ ರಾಮ್‌ಚರಣ್, ಜೂನಿಯರ್ ಎನ್‌ಟಿಆರ್‌ ಹಾಗೂ ರಾಜಮೌಳಿ
RRR ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ದ ರಾಮ್‌ಚರಣ್, ಜೂನಿಯರ್ ಎನ್‌ಟಿಆರ್‌ ಹಾಗೂ ರಾಜಮೌಳಿ   

ಬೆಂಗಳೂರು: ‘ಪುನೀತ್ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲ ಎಂದೆನಿಸುವುದಿಲ್ಲ. ಅವರು ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ’ ಎಂದು ನಟ ಜೂನಿಯರ್ ಎನ್‌ಟಿಆರ್ ಹೇಳಿದರು.

ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆಗೂ ಮುನ್ನ ಬೆಂಗಳೂರಿನ ದೇವನಹಳ್ಳಿ ಬಳಿ ಖಾಸಗಿ ರೆಸಾರ್ಟ್ ಒಂದರಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಅಗಲಿದ ಅಪ್ಪುವನ್ನು ಸ್ಮರಿಸಿದರು.

‘ಆರ್‌ಆರ್‌ಆರ್‌ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ಅಗಲಗುರ್ಕಿಯ ಬಳಿ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಅಪ್ಪುವಿಗೆ ಅರ್ಪಿಸುತ್ತಿದ್ದೇವೆ. ಅವರು ನಮ್ಮ ಬೆನ್ನ ಹಿಂದೆಯೇ ಇರಲಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಅವರ ‘ಪವರ್‘ ಇರಲಿದೆ’ ಎಂದು ಹೇಳಿದರು.

ADVERTISEMENT

‘ಎನರ್ಜಿಗೆ ಪುನೀತ್ ರಾಜ್‌ಕುಮಾರ್ ಅವರು ಮತ್ತೊಂದು ಹೆಸರು’ ಎಂದು ನಟ ರಾಮ್‌ಚರಣ್ ಹೇಳಿದರು. ಜೇಮ್ಸ್ ಶೋಗಳಿಗೆ ಆರ್‌ಆರ್‌ಆರ್‌ ಸಿನಿಮಾ ಶೋಗಳಿಂದ ತೊಂದರೆ ಆಗುವುದಿಲ್ಲ ಎಂದು ವೆಂಕಟರಾಜು ಹೇಳಿದರು.

ಇನ್ನು ನಿರ್ದೇಶಕ ರಾಜಮೌಳಿ ಮಾತನಾಡಿ, ‘ಆರ್‌ಆರ್‌ಆರ್ ಯಾವುದೇ ನೈಜ ಘಟನೆ ಆಧಾರಿತ ಅಥವಾ ಐತಿಹಾಸಿಕ ಚಿತ್ರವಲ್ಲ. ಯಾರೊಬ್ಬರಿಗೂ ಸಂಬಂಧಿಸಿದ್ದಲ್ಲ. ಇದೊಂದು ಪರಿಪೂರ್ಣ ಫಿಕ್ಷನ್ (ಕಾಲ್ಪನಿಕ) ಸಿನಿಮಾ’ ಎಂದರು.

‘ನಾನು ಪ್ರತಿಯೊಂದು ಸಿನಿಮಾವನ್ನು ನನ್ನ ಮೊದಲ ಸಿನಿಮಾ ಎಂದು ನಿರ್ದೇಶನ ಮಾಡುತ್ತೇನೆ. ಅದರ ಸಾಧಕ ಬಾಧಕಗಳ ಬಗ್ಗೆ ಹೆಚ್ಚು ವಿಚಾರಿಸಲು ಹೋಗುವುದಿಲ್ಲ. ನನ್ನನ್ನೂ, ನನ್ನ ಕುಟುಂಬದವರೂ ಸೇರಿದಂತೆ ಸಾಕಷ್ಟು ಜನ ವಿಮರ್ಶೆ ಮಾಡುವವರು ಇದ್ದಾರೆ. ಅವರೆಲ್ಲರ ಅಭಿಪ್ರಾಯ ಪಡೆದು ಕೆಲಸ ಮಾಡುತ್ತೇನೆ’ ಎಂದರು.

‘ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಬೆಳೆದಿದ್ದು ಆಂಧ್ರಪ್ರದೇಶದಲ್ಲಿ, ವೃತ್ತಿ ಜೀವನ ಪ್ರಾರಂಭಿಸಿದ್ದು ತಮಿಳುನಾಡಿನಿಂದ. ಇವಾಗ ಇರುವುದು ತೆಲಂಗಾಣದಲ್ಲಿ. ಪ್ರತಿಯೊಂದು ಊರಿಗೆ ಅದರದ್ದೇಯಾದ ಮಹತ್ವವಿದೆ. ನಾನು ಎಲ್ಲವನ್ನೂ ಪ್ರೀತಿಸುತ್ತೇನೆ. ಆದರೆ, ಒಂದಕ್ಕೆ ಅಂಟಿಕೊಂಡಿರಲು ಇಷ್ಟಪಡುವುದಿಲ್ಲ’ ಎಂದರು.

‘ಆರ್‌ಆರ್‌ಆರ್ ಒಂದು ಪಕ್ಕಾ ಮನೋರಂಜನೆ ನೀಡುವ ಸಿನಿಮಾ. ಸಿನಿಮಾ ಮೂಲಕ ನಾನು ಯಾವುದೇ ಸಂದೇಶವನ್ನೂ ಯಾರಿಗೂ ಕೊಡಲು ಹೋಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.