ಬೆಂಗಳೂರು: 'ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಸಿನಿ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ರುಕ್ಮಿಣಿ ವಸಂತ್ ಅವರು ಕಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಿಂದ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.
‘ಕಾಂತಾರ’ ಪ್ರೀಕ್ವೆಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರು ಸದ್ಯದಲ್ಲಿಯೇ ತೆಲುಗಿನ ಸ್ಟಾರ್ ನಟ ಜ್ಯೂನಿಯರ್ ಎನ್‌ಟಿಆರ್ ಅವರಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅವರಾಗಲಿ, ನಿರ್ಮಾಣ ಸಂಸ್ಥೆಯಾಗಲಿ ಅಧಿಕೃತವಾಗಿ ತಿಳಿಸಿಲ್ಲ.
ಸದ್ಯ ಅವರು ಎ.ಆರ್. ಮುರುಗದಾಸ್ ನಿರ್ದೇಶಿಸಿರುವ, ಶಿವಕಾರ್ತೀಕೇಯನ್ ಅಭಿನಯದ ‘ಮದರಾಸಿ’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಭಾನುವಾರ ನಡೆದ ಚಿತ್ರದ ಪ್ರಿ–ರಿಲೀಸ್ ಕಾರ್ಯಕ್ರಮದಲ್ಲಿ ನಿರ್ಮಾಪಕ ಎನ್.ವಿ. ಪ್ರಸಾದ್ ಅವರು ಜ್ಯೂನಿಯರ್ ಎನ್‌ಟಿಆರ್ ಚಿತ್ರಕ್ಕೆ ರುಕ್ಮಿಣಿ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಚಿತ್ರದ ಟೈಟಲ್ ಇನ್ನಷ್ಟೇ ಅಧಿಕೃತವಾಗಬೇಕಿದೆ. ಮುಂದಿನ ವರ್ಷ ಜೂನ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
‘ಡ್ರ್ಯಾಗನ್’ಗೆ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಜೂನಿಯರ್ ಎನ್‌ಟಿಆರ್ ನಟನೆಯ ‘ದೇವರಾ’ ಮತ್ತು ‘ವಾರ್–2’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದ್ದವು.
ರುಕ್ಮಿಣಿ ವಸಂತ್ ಅವರ ನಟನೆಯ ‘ಮದರಾಸಿ’ ಸೆಪ್ಟೆಂಬರ್ 5ಕ್ಕೆ ಬಿಡುಗಡೆಯಾಗಲಿದೆ. ‘ಕಾಂತಾರ’ ಪ್ರೀಕ್ವೆಲ್ ಅಕ್ಟೋಬರ್ 2ರಂದು ಬೆಳ್ಳಿತೆರೆಗೆ ಬರಲಿದೆ. ಇನ್ನು ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲಿಯೂ ರುಕ್ಮಿಣಿ ಅವರು ನಟಿಸಿದ್ದು, ಮುಂದಿನ ವರ್ಷ ತೆರೆ ಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.