ಬೆಂಗಳೂರು: ಅನುಮತಿ ಪಡೆದುಕೊಳ್ಳದೆ ತನ್ನ ಜೀವನಚರಿತ್ರೆಯನ್ನು ಸಿನಿಮಾ ಮಾಡಲಾಗುತ್ತಿದ್ದು, ಆ ಚಿತ್ರದ ಚಿತ್ರೀಕರಣಕ್ಕೆ ತಡೆಯೊಡ್ಡಬೇಕು ಎಂದು ಸಾಲುಮರದ ತಿಮ್ಮಕ್ಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೋಮವಾರ(ಜೂನ್ 16) ದೂರು ನೀಡಿದ್ದಾರೆ.
ಇತ್ತೀಚೆಗಷ್ಟೇ ಒರಟ ಶ್ರೀ ನಿರ್ದೇಶನದಲ್ಲಿ ‘ವೃಕ್ಷಮಾತೆ’ ಎನ್ನುವ ಸಿನಿಮಾ ಸೆಟ್ಟೇರಿತ್ತು. ದಿಲೀಪ್ ಕುಮಾರ್ ಎಚ್.ಆರ್. ಈ ಸಿನಿಮಾ ನಿರ್ಮಾಣ ಮಾಡಲಿದ್ದು, ಇದು ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿ ಆಧಾರಿತ ಚಿತ್ರ ಎಂದು ಚಿತ್ರತಂಡ ತಿಳಿಸಿತ್ತು. ಇದರ ಬೆನ್ನಲ್ಲೇ ಈ ದೂರು ದಾಖಲಾಗಿದೆ.
‘ಒಂದು ತಿಂಗಳ ಹಿಂದೆ ದಿಲೀಪ್ ಕುಮಾರ್ ಹಾಗೂ ಒರಟ ಶ್ರೀ ಅವರು ಬಂದು ಸಿನಿಮಾಗೆ ಅನುಮತಿ ಕೇಳಿದ್ದರು. ನಾವು ಅನುಮತಿ ನೀಡಿರಲಿಲ್ಲ. ಬಹಳಷ್ಟು ನಿರ್ದೇಶಕರು ಇದೇ ರೀತಿ ಅನುಮತಿ ಕೇಳಿದ್ದರು. ಹಲವರು ಹಣ ನೀಡುವುದಾಗಿಯೂ ತಿಳಿಸಿದ್ದರು. ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ ಆಗುವುದು ಒಂದೇ ಬಾರಿ. ಹೀಗಾಗಿ ವಿಶ್ವಮಟ್ಟಕ್ಕೆ ತಲುಪಬೇಕು. ಸೂಕ್ತ ನಟ–ನಟಿಯರಿಲ್ಲದೆ ಇದಕ್ಕೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದೆವು’ ಎಂದು ತಿಮ್ಮಕ್ಕನವರ ದತ್ತುಪುತ್ರ ಉಮೇಶ್ ಹೇಳಿದರು.
‘ನೆಲ್ಲಿಕಟ್ಟೆ ಸಿದ್ದೇಶ್ ಎನ್ನುವವರು ತಿಮ್ಮಕ್ಕ ಅವರ ಕೃತಿ ಬರೆದಿದ್ದಾರೆ. ಇದು ಸುಳ್ಳಿನ ಕಂತೆ. ಈ ಪುಸ್ತಕ ಹಿಂಪಡೆಯಿರಿ ಎಂದು ಹಿಂದೆಯೇ ಹೇಳಿದ್ದೆವು. ಚಿತ್ರತಂಡವು ಈ ಕೃತಿ ಆಧಾರಿತ ಸಿನಿಮಾ ಮಾಡುವುದಾಗಿ ಹೇಳುತ್ತಿದೆ. ಈ ಕೃತಿಯೇ ಸುಳ್ಳಿನ ಕಂತೆ ಆಗಿದ್ದಾಗ ನೈಜ ತಿಮ್ಮಕ್ಕನನ್ನು ತೋರಿಸುವುದು ಹೇಗೆ? ಸಿನಿಮಾದ ಚಿತ್ರೀಕರಣಕ್ಕೆ ಅವಕಾಶ ಕೊಡುವುದಿಲ್ಲ. ನಾನು ಅನುಮತಿ ನೀಡಿಲ್ಲ ಎನ್ನುವ ಕಾರಣಕ್ಕೆ ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಚಿತ್ರತಂಡದ ಈ ಆರೋಪದ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.