ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಆಟೊ ಚಾಲಕ ಭಜನ್ ಸಿಂಗ್ ರಾಣಾ
ಮುಂಬೈ: ದುಷ್ಕರ್ಮಿಯಿಂದ ಚಾಕು ಇರಿತಕ್ಕೊಳಗಾಗಿದ್ದ ಸಂದರ್ಭದಲ್ಲಿ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಆಟೊ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ಬಾಲಿವುಡ್ ನಟ ಸೈಫ್ ಅಲಿ ಖಾನ್ ಭೇಟಿಯಾಗಿದ್ದಾರೆ.
ನಟ ಸೈಫ್ ಅಲಿ ಖಾನ್ ಅವರು ಐದು ದಿನಗಳ ಚಿಕಿತ್ಸೆ ಬಳಿಕ ಮಂಗಳವಾರ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಭಜನ್ ಸಿಂಗ್ ರಾಣಾ ಅವರನ್ನು ಆಸ್ಪತ್ರೆಗೆ ಕರೆಸಿಕೊಂಡಿದ್ದ ಸೈಫ್, ಕೆಲಕಾಲ ಮಾತುಕತೆ ನಡೆಸಿದ್ದಾರೆ.
ಗಾಯಗೊಂಡಿದ್ದ ವೇಳೆ ತಮ್ಮನ್ನು ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಕ್ಕೆ ಭಜನ್ ಸಿಂಗ್ ರಾಣಾ ಅವರಿಗೆ ಸೈಫ್ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ, ಅವರೊಂದಿಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇದೀಗ ರಾಣಾ ಜತೆ ಸೈಫ್ ಸಂತಸ ಹಂಚಿಕೊಳ್ಳುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸೈಫ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಕ್ಕಾಗಿ ಭಜನ್ ಸಿಂಗ್ ರಾಣಾ ಅವರಿಗೆ ಸಂಸ್ಥೆಯೊಂದು ₹11,000 ಬಹುಮಾನ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಜತೆಗೆ, ಸೈಫ್ ಅವರ ಕಡೆಯಿಂದಲ್ಲೂ ರಾಣಾಗೆ ಸೂಕ್ತ ಬಹುಮಾನ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಜ. 16ರಂದು ಅವರ ಮನೆಯಲ್ಲಿಯೇ ನಟನಿಗೆ, ದುಷ್ಕರ್ಮಿಯೊಬ್ಬ ಆರು ಬಾರಿ ಚೂರಿಯಿಂದ ಇರಿದಿದ್ದ. ಗಂಭೀರ ಸ್ವರೂಪದ ಗಾಯಗಳೊಂದಿಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಖಾನ್ ಅವರಿಗೆ ಕೈಗೆ 2 ಕಡೆ, ಕತ್ತಿನ ಬಲಭಾಗ ಮತ್ತು ಬೆನ್ನಿನಲ್ಲಿ ಗಾಯ ಆಗಿತ್ತು. ಶಸ್ತ್ರಚಿಕಿತ್ಸೆ ನಡೆಸಿ, ಬೆನ್ನುಮೂಳೆ ಬಳಿ ಸಿಲುಕಿದ್ದ ಚಾಕುವಿನ ಮುರಿದ ಭಾಗವನ್ನು ವೈದ್ಯರು ತೆಗೆದಿದ್ದರು. ತುಸು ಚೇತರಿಕೆ ಬಳಿಕ ತೀವ್ರ ನಿಗಾ ಘಟಕದಿಂದ ವಿಶೇಷ ವಾರ್ಡ್‌ಗೆ ಜ. 17ರಂದು ಸ್ಥಳಾಂತರಿಸಲಾಗಿತ್ತು.
ಸೈಫ್ ಅಲಿ ಖಾನ್ ಅವರಿಗೆ ಚಾಕು ಇರಿದಿದ್ದ ಆರೋಪಿ, ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.