ADVERTISEMENT

ನಟ ಸೈಫ್ ಕುಟುಂಬದ ₹15,000 ಕೋಟಿ ಮೌಲ್ಯದ ಆಸ್ತಿ ಕೇಂದ್ರದ ಪಾಲಾಗುವ ಸಾಧ್ಯತೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2025, 9:14 IST
Last Updated 22 ಜನವರಿ 2025, 9:14 IST
<div class="paragraphs"><p>ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ದಂಪತಿ</p></div>

ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ದಂಪತಿ

   

ನವದೆಹಲಿ: ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಅವರ ಕುಟುಂಬಕ್ಕೆ (ಪಟೌಡಿ) ಸೇರಿದ ಮಧ್ಯಪ್ರದೇಶದಲ್ಲಿರುವ ₹15,000 ಕೋಟಿ ಮೌಲ್ಯದ ಆಸ್ತಿಯನ್ನು ಕೇಂದ್ರ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

2015ರಲ್ಲಿ ಪಟೌಡಿ ಕುಟುಂಬದ ಆಸ್ತಿಗಳ ಮೇಲೆ ವಿಧಿಸಿದ್ದ ತಡೆಯಾಜ್ಞೆಯನ್ನು ಮಧ್ಯಪ್ರದೇಶ ಹೈಕೋರ್ಟ್‌ ತೆಗೆದುಹಾಕಿದೆ.ಇದರಿಂದ 1968ರ ಶತ್ರು ಆಸ್ತಿ ಕಾಯ್ದೆಯ ಪ್ರಕಾರ, 1947ರ ರಾಷ್ಟ್ರ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳ ಆಸ್ತಿಯನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ADVERTISEMENT

ಸೈಫ್ ಅಲಿ ಖಾನ್ ಮತ್ತು ಅವರ ಕುಟುಂಬಸ್ಥರು ಭೋಪಾಲ್‌ನಲ್ಲಿ ಹಲವಾರು ಅರಮನೆಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಫ್ಲಾಗ್ ಸ್ಟಾಫ್ ಹೌಸ್, ದಾರ್-ಉಸ್-ಸಲಾಮ್, ನೂರ್-ಉಸ್ ಸಬಾಹ್ ಅರಮನೆ, ಅಹಮದಾಬಾದ್ ಅರಮನೆ, ಹಬೀಬಿ ಬಂಗಲೆ, ಕೊಹೆಫಿಕ್ಸಾ ಪ್ರಾಪರ್ಟಿ ಸೇರಿದಂತೆ ಇತರೆ ಆಸ್ತಿಗಳು ಸೇರಿವೆ.

2024ರ ಡಿಸೆಂಬರ್ 13ರಂದು ಹೈಕೋರ್ಟ್‌ನ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಪಟೌಡಿ ಕುಟುಂಬದ ಅರ್ಜಿಯನ್ನು ವಜಾಗೊಳಿಸಿತ್ತು. ಹಾಗೆಯೇ ಜನವರಿ 13ರವರೆಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು. ಆದರೆ, ಸೈಫ್ ಅಲಿ ಖಾನ್ ಕುಟುಂಬ ಮೇಲ್ಮನವಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

ತಡೆಯಾಜ್ಞೆ ತೆರವಾಗಿರುವುದರಿಂದ ಕೇಂದ್ರ ಸರ್ಕಾರ ‌ಆಸ್ತಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದು. ಈ ಮಧ್ಯೆ ಪಟೌಡಿ ಕುಟುಂಬ ಸುಪ್ರೀಂ ಕೋರ್ಟ್ ‌ಮೆಟ್ಟಿಲೇರಿ ಪರಿಹಾರ ಕಂಡುಕೊಳ್ಳದಿದ್ದರೆ ₹15 ಸಾವಿರ ಕೋಟಿ ಆಸ್ತಿ ಕೇಂದ್ರ ಸರ್ಕಾರದ ವಶವಾಗುತ್ತದೆ. 'ಹೈಕೋರ್ಟ್ ಆದೇಶ ಸ್ಪಷ್ಟವಾದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಭೋಪಾಲ್ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಮನೆಗೆ ಮರಳಿದ ಸೈಫ್‌ ಅಲಿ ಖಾನ್‌

ದುಷ್ಕರ್ಮಿಯಿಂದ ಚೂರಿ ಇರಿತಕ್ಕೆ ಗುರಿಯಾಗಿದ್ದ ನಟ ಸೈಫ್‌ ಅಲಿ ಖಾನ್‌ ಅವರು ಐದು ದಿನಗಳ ಚಿಕಿತ್ಸೆ ಬಳಿಕ ಮಂಗಳವಾರ ಲೀಲಾವತಿ ಆಸ್ಪ‍ತ್ರೆಯಿಂದ ಮನೆಗೆ ತೆರಳಿದ್ದಾರೆ.

ಜ. 16ರಂದು ಅವರ ಮನೆಯಲ್ಲಿಯೇ ನಟನಿಗೆ, ದುಷ್ಕರ್ಮಿ ಆರು ಬಾರಿ ಚೂರಿಯಿಂದ ಇರಿದಿದ್ದ. ಗಂಭೀರ ಸ್ವರೂಪದ ಗಾಯಗಳೊಂದಿಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್‌ ಧರಿಸಿದ್ದ 54 ವರ್ಷ ವಯಸ್ಸಿನ ನಟ, ಕಪ್ಪು ಬಣ್ಣದ ಕನ್ನಡಕಧಾರಿಯಾಗಿದ್ದರು. ಆಸ್ಪತ್ರೆ ಗೇಟಿನ ಹೊರಗಿದ್ದ ಅಭಿಮಾನಿಗಳು, ಮಾಧ್ಯಮದವರತ್ತ ಕೈಬೀಸಿ, ಕಾರಿನತ್ತ ನಡೆದರು. ಪತ್ನಿ ಕರೀನಾ ಜೊತೆಗಿದ್ದರು.

ಖಾನ್‌ ಅವರಿಗೆ ಕೈಗೆ 2 ಕಡೆ, ಕತ್ತಿನ ಬಲಭಾಗ ಮತ್ತು ಬೆನ್ನಿನಲ್ಲಿ ಗಾಯ ಆಗಿತ್ತು. ಶಸ್ತ್ರಚಿಕಿತ್ಸೆ ನಡೆಸಿ, ಬೆನ್ನುಮೂಳೆ ಬಳಿ ಸಿಲುಕಿದ್ದ ಚಾಕುವಿನ ಮುರಿದ ಭಾಗವನ್ನು ವೈದ್ಯರು ತೆಗೆದಿದ್ದರು. ತುಸು ಚೇತರಿಕೆ ಬಳಿಕ ತೀವ್ರ ನಿಗಾ ಘಟಕದಿಂದ ವಿಶೇಷ ವಾರ್ಡ್‌ಗೆ ಜ. 17ರಂದು ಸ್ಥಳಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.