Pushpa 2 The Rule: ಕಿಸಕ್ ಹಾಡಿಗೆ ಅಲ್ಲು ಅಭಿಮಾನಿಗಳು ಬೇಸರ?
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ–2 ದಿ ರೂಲ್’ ಇದೇ ಡಿಸೆಂಬರ್ 5ಕ್ಕೆ ಬಿಡುಗಡೆಯಾಗಲಿದ್ದು ತೀವ್ರ ಕುತೂಹಲ ಮೂಡಿಸಿದೆ.
ಈಗಾಗಲೇ ಚಿತ್ರದ ಟ್ರೇಲರ್‌ಗಳು ಸಾಕಷ್ಟು ಸದ್ದು ಮಾಡಿದ್ದು ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಪುಷ್ಪ.–1ರ ‘ಊ ಅಂಟಾವಾ’ ಹಾಡು ಹಾಗೂ ಆ ಹಾಡಿಗೆ ಸೊಂಟ ಬಳುಕಿಸಿದ್ದ ಸಮಂತಾ ನೋಟ ಇನ್ನೂ ಚಿತ್ರ ರಸಿಕರ ಮನದಲ್ಲಿ ಹಸಿ ಹಸಿಯಾಗಿದೆ. ಈಗ ಇದಕ್ಕೆ ಸಮಾನವಾಗಿ ಪುಷ್ಪ–2ದಲ್ಲೂ ಒಂದು ಐಟಂ ಸಾಂಗ್ ಇದ್ದು ಈ ಹಾಡಿನಲ್ಲಿ ಕನ್ನಡದ ಶ್ರೀಲೀಲಾ ಮೈ ಬಳುಕಿಸಿದ್ದಾರೆ.
ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿರುವ ಕಿಸಕ್ ಹಾಡಿನಲ್ಲಿ ಶ್ರೀಲೀಲಾ ಹಾಗೂ ಅಲ್ಲು ಅರ್ಜುನ್ ಅದ್ಭುತವಾಗಿ ನೃತ್ಯ ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ಹಾಡು ಊ ಅಂಟಾವಾ ಹಾಡಿನಷ್ಟು ಚೆನ್ನಾಗಿಲ್ಲ. ಎಂಬ ಅಭಿಪ್ರಾಯಗಳೂ ಹೆಚ್ಚು ವ್ಯಕ್ತವಾಗುತ್ತಿವೆ. ಸಮಂತಾ–ಶ್ರೀಲೀಲಾ ಹೋಲಿಸಿ ಚರ್ಚೆ ಆರಂಭಿಸಿದ್ದಾರೆ.
ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತೆಲುಗು, ಹಿಂದಿ ಭಾಷೆಯ ಕಿಸಕ್ ಹಾಡನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದೆ.
ಖ್ಯಾತ ನಿರ್ದೇಶಕ ಸುಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪುಷ್ಪ–1 ದಿ ರೈಸ್ ಸಿನಿಮಾ ಅಂತೂ ಭಾರಿ ಯಶಸ್ಸು ಕಂಡು ಸಾವಿರ ಕೋಟಿ ಕ್ಲಬ್ ಸೇರಿತ್ತು. ಮೈತ್ರಿ ಮೂವೀಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.
ಪುಷ್ಪ–2 ಟ್ರೇಲರ್ ಅದ್ಧೂರಿಯಾಗಿ ಮೂಡಿಬಂದಿದ್ದು ಸಿನಿಮಾದ ಬಗ್ಗೆ ಭಾರಿ ಕುತೂಹಲ ಮೂಡುವಂತೆ ಮಾಡಿದೆ.
ಚಿತ್ರದಲ್ಲಿ ಎಎ ಜೊತೆ ಕನ್ನಡದ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಡಾಲಿ ಧನಂಜಯ ಸೇರಿದಂತೆ ಅನೇಕ ಖ್ಯಾತನಾಮರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪುಷ್ಪ-1 ಚಿತ್ರವು 2021ರ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.