ADVERTISEMENT

ರೊಮ್ಯಾಂಟಿಕ್‌ ಸಿನಿಮಾಗಳ ಖ್ಯಾತಿಯ ಯೋಗರಾಜ್ ಭಟ್ ಅವರ ಆ್ಯಕ್ಷನ್ ಚಿತ್ರ ‘ಗರಡಿ’

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 11:04 IST
Last Updated 29 ಏಪ್ರಿಲ್ 2022, 11:04 IST
ಗರಡಿ ಚಿತ್ರದಲ್ಲಿ ಸೂರ್ಯ ಹಾಗೂ ಸುಜಯ್‌ ಬೇಲೂರು
ಗರಡಿ ಚಿತ್ರದಲ್ಲಿ ಸೂರ್ಯ ಹಾಗೂ ಸುಜಯ್‌ ಬೇಲೂರು   

ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾಗಳಿಂದಲೇ ಗುರುತಿಸಿಕೊಂಡಿರುವ ನಿರ್ದೇಶಕ ಯೋಗರಾಜ್‌ ಭಟ್‌ ಅವರು ಇದೀಗ ಪಕ್ಕಾ ಆ್ಯಕ್ಷನ್‌ ಸಿನಿಮಾ ‘ಗರಡಿ’ಯೊಳಗೆ ಪ್ರವೇಶಿಸಿದ್ದಾರೆ. 11 ಸಾಹಸದೃಶ್ಯಗಳನ್ನೊಳಗೊಂಡ ಈ ಸಿನಿಮಾದ ಚಿತ್ರೀಕರಣ ಶೇ 70ರಷ್ಟು ಪೂರ್ಣಗೊಂಡಿದ್ದು, ಮಧ್ಯಂತರದಲ್ಲಿ ಬರುವ ಕುಸ್ತಿ ಪಂದ್ಯಾವಳಿಯ ಚಿತ್ರೀಕರಣ ಬೆಂಗಳೂರು ಸಮೀಪದ ಚಿಕ್ಕಜಾಲದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ‘ಗರಡಿ’ ಚಿತ್ರದ ಕುರಿತು ಮಾತಿಗಿಳಿದ ಯೋಗರಾಜ್‌ ಭಟ್‌, ‘ಆ್ಯಕ್ಷನ್‌ ಜೊತೆಗೆ ಪ್ರೇಮಕಥೆಯೂ ಚಿತ್ರದಲ್ಲಿದೆ. ವೈಯಕ್ತಿಕವಾಗಿ ಹೃದಯಕ್ಕೆ ತುಂಬಾ ಹತ್ತಿರವಾದ ಬರಹ ‘ಗರಡಿ’. ಗರಡಿ ಒಬ್ಬ ಬಡವನ ಕಥೆ. ‘ಅನಿಸಬಹುದು ನಿನಗೆ ಇದು ತುಂಬಾ ಸಣ್ಣ ವಿಷಯ. ಅರಿಯದೇನೆ ನಾನು ಆಗಿರುವೆ ನಿನ್ನ ಇನಿಯ. ಬೇರೆ ಯಾರೇ ನಿಂತರೂ ನಿನ್ನ ಬಾಜು. ಒಡೆದೇ ಹೋಗಬಹುದು ನನ್ನ ಬದುಕಿನ ಗಾಜು. ದಯಮಾಡಿ ಉರಿಸಬೇಡ ಈ ಬಡವನ ಹೃದಯ..’ ಹೀಗೊಂದು ಹಾಡು ಬರೆದ ಮೇಲೆ ನಾಯಕ ಪಾತ್ರಪೋಷಣೆ ಕೈಗೆ ಸಿಕ್ಕಿತು. ಅತಿ ಸಾಮಾನ್ಯನ ಕಥೆ ಇದು. ನನಗೆ ಏಕಲವ್ಯನ ಪಾತ್ರ ಬಹಳ ಇಷ್ಟ. ಗುರುವಿನ ಸಹಕಾರವಿಲ್ಲದೇ ಒಬ್ಬನೇ ಕಲಿಯುತ್ತಾನೆ. ಗರಡಿಯಲ್ಲಿನ ಹೀರೊ ಕೂಡಾ ಏಕಲವ್ಯನಂತೆ. ಗರಡಿಯಲ್ಲಿ ಅಡುಗೆ ಮಾಡಿಕೊಂಡಿದ್ದ ಯುವಕ ಮುಂದೆ ಏನಾಗುತ್ತಾನೆ? ಎನ್ನುವುದೇ ಕಥೆ. ನಟ ದರ್ಶನ್‌ ಅವರೇ ಸೂರ್ಯನನ್ನು ಹೀರೊ ಸ್ಥಾನಕ್ಕೆ ಆಯ್ಕೆ ಮಾಡಿದರು’ ಎಂದರು.

‘ನಾಯಕನ ಅಣ್ಣನ ಪಾತ್ರದಲ್ಲಿ (ಶಂಕರ್‌) ದರ್ಶನ್‌ ಅವರು ನಟಿಸುತ್ತಿದ್ದು, ಅವರು ಯುವಕನಾಗಿದ್ದ ಸಂದರ್ಭದಲ್ಲಿ ಕುಸ್ತಿಪಟು ಆಗಿರುತ್ತಾನೆ. ಅಪರಾಧ ಕೃತ್ಯವೊಂದರಲ್ಲಿ ಶಂಕರ್‌ ಸಿಲುಕಿದ ಸಂದರ್ಭದಲ್ಲಿ ಗರಡಿಯೊಂದ ಹೊರದಬ್ಬಲ್ಪಡುತ್ತಾನೆ. ಕೊನೆಯಲ್ಲಿ ಕಥೆಯನ್ನು ಉಳಿಸಲು ಆತನ ಮರುಪ್ರವೇಶವಾಗುತ್ತದೆ. ನಟ, ಸಚಿವ ಬಿ.ಸಿ.ಪಾಟೀಲ ಅವರು ಗರಡಿ ಗುರುಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ’ ಎಂದು ಯೋಗರಾಜ್‌ ಭಟ್‌ ವಿವರಿಸಿದರು.

ADVERTISEMENT

ಚಿತ್ರದಲ್ಲಿ ವಿಲನ್‌ ಪಾತ್ರದಲ್ಲಿ ಬಿ.ಸಿ.ಪಾಟೀಲ್‌ ಅವರ ಅಳಿಯ ಸುಜಯ್‌ ಬೇಲೂರು ಬಣ್ಣಹಚ್ಚಿದ್ದಾರೆ. ರವಿಶಂಕರ್, ಧರ್ಮಣ್ಣ ಕಡೂರ್‌, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.