ADVERTISEMENT

ಸೋಲು–ಗೆಲುವು ಪ್ರೇಕ್ಷಕರು ನಿರ್ಧರಿಸುತ್ತಾರೆ; ಸತೀಶ್‌ ನೀನಾಸಂ

ವಿನಾಯಕ ಕೆ.ಎಸ್.
Published 27 ಫೆಬ್ರುವರಿ 2026, 0:04 IST
Last Updated 27 ಫೆಬ್ರುವರಿ 2026, 0:04 IST
<div class="paragraphs"><p>ಸತೀಶ್‌ ನೀನಾಸಂ</p></div>

ಸತೀಶ್‌ ನೀನಾಸಂ

   

ಸತೀಶ್‌ ನೀನಾಸಂ, ಸಪ್ತಮಿ ಗೌಡ ನಟನೆಯ ‘ದಿ ರೈಸ್‌ ಆಫ್‌ ಅಶೋಕ’ ಚಿತ್ರ ಇಂದು (ಫೆ.27) ತೆರೆ ಕಾಣುತ್ತಿದೆ. ಎಲ್ಲ ಸಮಸ್ಯೆಗಳನ್ನು ದಾಟಿ ಸಿನಿಮಾ ಬಿಡುಗಡೆಯಾಗುತ್ತಿರುವ ಹಾಗೂ ಈ ಪಯಣದಲ್ಲಿ ತಮಗಾದ ಅನುಭವಗಳ ಕುರಿತು ಸತೀಶ್‌ ನೀನಾಸಂ ಮಾತನಾಡಿದ್ದಾರೆ...

ಅಶೋಕ ಬ್ಲೇಡ್‌’ ಎಂದಿದ್ದ ಚಿತ್ರದ ಶೀರ್ಷಿಕೆ ನಂತರ ಬದಲಾಗಿದ್ದು ಏಕೆ?

ADVERTISEMENT

‘ಅಶೋಕ ಬ್ಲೇಡ್‌’ ಎಂಬುದು ಸೀಮಿತವಾಗುತ್ತದೆ, ಒಂದು ಚೌಕಟ್ಟಿನೊಂದಿಗೆ ಕಥೆಗೆ ಅರ್ಥಪೂರ್ಣವಾಗುವುದಿಲ್ಲ ಎನಿಸಿತು. ಹೀಗಾಗಿ ಶೀರ್ಷಿಕೆ ಬದಲಿಸಿದೆವು. ಇದು ಅಶೋಕನ ಕಥೆಯಾಗಿರುವುದರಿಂದ ‘ದಿ ರೈಸ್‌ ಆಫ್‌ ಅಶೋಕ’ ಕಥೆಯನ್ನು ಪರಿಪೂರ್ಣವಾಗಿ ಪ್ರತಿನಿಧಿಸುವ ಶೀರ್ಷಿಕೆ. 

ಯಾವ ಜಾನರ್‌ನ ಸಿನಿಮಾವಿದು?

ಆ್ಯಕ್ಷನ್‌, ಎಂಟರ್‌ಟೈನ್‌ಮೆಂಟ್‌ ಜಾನರ್‌ ಸಿನಿಮಾ. ಎಲ್ಲಾ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಕಥೆ. ಒಂದು ಕಾಲಘಟ್ಟದ, 1970ರ ಆಸುಪಾಸಿನ ಕಥೆ ಇದು. 

ಯಾವುದೇ ಒಂದು ಪ್ರಾಂತ್ಯ, ಸಮುದಾಯಕ್ಕೆ ಸೀಮಿತವಾದ ಕಥೆಯೇ?

ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು ಸುತ್ತಮುತ್ತಲು ಚಿತ್ರೀಕರಿಸಿದ್ದೇವೆ. ಆದರೆ ಭಾಷೆ ಯಾವುದೇ ಸಮುದಾಯ, ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ. ಇದೊಂದು ಕಾಲ್ಪನಿಕ ಕಥೆ. ಕೆಲ ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿರುವ ಸಿನಿಮಾ. 

ನಾಲ್ಕಾರು ತಿಂಗಳ ಹಿಂದೆಯೇ ಈ  ಸಿನಿಮಾದ ಪ್ರಚಾರ ಪ್ರಾರಂಭಿಸಿದ್ದೀರಿ. ನಿಮ್ಮ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಹೆಚ್ಚು ಶ್ರಮ ಇದರಲ್ಲಿ ಕಾಣುತ್ತಿದೆಯಲ್ಲವೇ?

ನಾನು ತುಂಬ ನಂಬಿ, ಮೆಚ್ಚಿಕೊಂಡು, ಆತ್ಮವಿಶ್ವಾಸದಿಂದ ಹತ್ತು ಸಿನಿಮಾಗಳಿಗೆ ಹಾಕುವ ಶ್ರಮವನ್ನು ಈ ಸಿನಿಮಾದ ಪ್ರಚಾರಕ್ಕೆ ಹಾಕಿರುವೆ. ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಹೀಗಾಗಿಯೇ ತಮಿಳು, ತೆಲುಗಿನಲ್ಲಿಯೂ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿಯೂ ಪ್ರೇಕ್ಷಕರು ಸಿನಿಮಾವನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ.   

‘ಕೆಜಿಎಫ್‌’, ‘ಕಾಂತಾರ’ಕ್ಕೆ ಎಲ್ಲ ಸಿನಿಮಾಗಳನ್ನು ಹೋಲಿಸಿಕೊಳ್ಳುವುದು ಬೇಡ. ನನಗೆ ನನ್ನ ಸಿನಿಮಾವಷ್ಟೇ ಮುಖ್ಯ ಎಂದು ನೀವು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಯಿತು...

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ‘ಕೆಜಿಎಫ್‌’, ‘ಕಾಂತಾರ’ದಿಂದ ಎಲ್ಲರಿಗೂ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಬೇಕೆಂಬ ಹಂಬಲ ಹೆಚ್ಚಾಗಿದೆ. ಆ ಥರ ಯೋಚನೆ ಮಾಡಿದ ಸಿನಿಮಾ ಇದಲ್ಲ. ಈ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಬೇಕು. ‘ಕೆಜಿಎಫ್‌’, ‘ಕಾಂತಾರ’ ನಮಗೆ ಹೆಮ್ಮೆ. ನಮ್ಮ ಸಿನಿಮಾವೂ ಅದೇ ರೀತಿ ಆಗಬೇಕು ಎಂಬುದರಲ್ಲಿ ತಪ್ಪೇನಿದೆ? ನಮಗೆ ಆ ಸಿನಿಮಾಗಳು ಸ್ಫೂರ್ತಿ. ಯಾರೋ ಕೆಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ಪ್ರೀತಿಸುವವರು, ಜತೆಗೆ ನಿಲ್ಲುವವರು ಸಾಕಷ್ಟು ಜನ ಇರುತ್ತಾರೆ. ಸಿನಿಮಾ ಚೆನ್ನಾಗಿ ಮಾಡಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪ್ರತಿಕ್ರಿಯಿಸುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಒಳ್ಳೆಯ ಸಿನಿಮಾಗಳನ್ನು ಮಾಡಬೇಕಾಗಿದ್ದು ನಮ್ಮ ಜವಾಬ್ದಾರಿ. ಯಾರು ಈಗ ತೆಗಳುತ್ತಾರೋ, ಅವರೇ ಒಳ್ಳೆಯ ಸಿನಿಮಾಗಳನ್ನು ಕೊಟ್ಟಾಗ ನಮ್ಮ ಜತೆಗೆ ನಿಂತುಕೊಳ್ಳುತ್ತಾರೆ ಎಂಬ ಭರವಸೆ ನನಗಿದೆ.

ಸಿನಿಮಾ ಮುಗಿಯುವ ಮೊದಲೇ ಈ ಚಿತ್ರದ ನಿರ್ದೇಶಕ ತೀರಿಕೊಂಡರು. ಹಲವು ಸಮಸ್ಯೆಗಳು ಎದುರಾದವು?

ಈ ಸಿನಿಮಾ ವಿನೋದ್‌ ದೋಂಡಾಳೆ ಕಂಡ ಕನಸು. ಅವರು ಯಾವಾಗಲೂ ನಮ್ಮ ಜತೆಗೆ ಇದ್ದಾರೆ ಎಂಬ ನಂಬಿಕೆ. ಅವರೇ ಇಷ್ಟು ದೊಡ್ಡ ಕನಸು ಕಂಡಿದ್ದು. ಸಿನಿಮಾದ ಹೊರಗೆ, ಒಳಗೆ ಎಲ್ಲ ಅವರೇ ಇದ್ದಾರೆ. ಇದರಾಚೆಗಿನ ಹಿಂದಿನ ಕೆಲ ಕಹಿ ಘಟನೆಗಳನ್ನು ನೆನಪಿಸಿಕೊಳ್ಳುವ ಸಮಯ ಇದಲ್ಲ. ಅವರ ಕನಸನ್ನು ಈಡೇರಿಸಿ ಸಿನಿಮಾವನ್ನು ತೆರೆಗೆ ತರುತ್ತಿರುವುದು ಖುಷಿ ಅನಿಸಿದೆ. ಚಿತ್ರದ ಸೋಲು–ಗೆಲುವನ್ನು ಪ್ರೇಕ್ಷಕರು ನಿರ್ಧರಿಸುತ್ತಾರೆ. ದೋಂಡಾಳೆ ಅವರ ಕನಸಿನ ಜತೆ ನಾವೆಲ್ಲ ನಿಂತಿದ್ದೇವೆ. ನನ್ನ ಜವಾಬ್ದಾರಿ ಅಲ್ಲದಿದ್ದರೂ ಜತೆ ನಿಂತು ಈ ಸಿನಿಮಾ ಪೂರೈಸಿಕೊಟ್ಟಿದ್ದೇನೆ ಎಂದಷ್ಟೇ ಹೇಳಬಲ್ಲೆ. 

ನಿಮ್ಮ ಮುಂದಿನ ಸಿನಿಮಾಗಳು...

‘ಅಯೋಗ್ಯ–2’ ಚಿತ್ರ ಪೂರ್ಣಗೊಂಡಿದೆ. ಮೇ ತಿಂಗಳಲ್ಲಿ ಆ ಚಿತ್ರ ತೆರೆಗೆ ಬರಲಿದೆ. ತಮಿಳಿನಲ್ಲಿ ಒಂದು ಸಿನಿಮಾ ನಡೆಯುತ್ತಿದೆ. ಕನ್ನಡದಲ್ಲಿ ಮತ್ತೊಂದು ಸಿನಿಮಾ ಶೀಘ್ರದಲ್ಲಿ ಸೆಟ್ಟೇರಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.