
ಸಯಾನಿ ಗುಪ್ತಾ
ಬೆಂಗಳೂರು: 'ಫೋರ್ ಮೋರ್ ಶಾಟ್ಸ್ ಪ್ಲೀಸ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿರುವ ಸಯಾನಿ ಗುಪ್ತಾ, ಒಂದು ದಶಕಕ್ಕೂ ಹೆಚ್ಚು ಕಾಲ ಸಿನಿ ಪಯಣದ ಭಾಗವಾಗಿದ್ದಾರೆ. ಇತ್ತೀಚೆಗೆ ಸಯಾನಿ ಗುಪ್ತಾ ಅವರು ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಉತ್ತಮ ಸಂಬಳ ಬರುತ್ತಿದ್ದ ಕಾರ್ಪೊರೇಟ್ ಉದ್ಯೋಗವನ್ನು ತೊರೆದು, ತಾಯಿಯ ತೀವ್ರ ವಿರೋಧದ ನಡುವೆಯೂ ತಮ್ಮ 21ನೇ ವಯಸ್ಸಿನಲ್ಲಿ ಸಿನಿ ಪಯಣ ಆರಂಭಿಸಿದ್ದಾಗಿ ಗುಪ್ತಾ ಹೇಳಿಕೊಂಡಿದ್ದಾರೆ.
'ನಾನು ಕೆಲಸ ಬಿಟ್ಟು ಸಿನಿಮಾ ರಂಗಕ್ಕೆ ಹೋಗುತ್ತೇನೆ ಎಂದು ನನ್ನ ತಾಯಿಯ ಬಳಿ ಹೇಳಿದಾಗ ಅವರು ಹೇಳಿದ್ದು, ಏಕೆ ಇಷ್ಟು ಸಂಬಳ ಬರುವ ಕೆಲಸ ಬಿಟ್ಟು ಸಿನಿಮಾ ಕಡೆ ಹೋಗ್ತೀಯಾ, ಹಾಗೇನಾದರೂ ಹೋದರೆ ನಿನ್ನ ಮೊಣ ಕೈ ಬಿರಿದು ಮುಲೆಗೆ ಕೂರಿಸ್ತೀನಿ ಅಂದಿದ್ರು. ಅಷ್ಟೇ ಅಲ್ಲಾ ನಟಿಯರು ಎಂದರೆ ವೇಶ್ಯೆಯರು ಎಂಬ ಭ್ರಮೆಯಲ್ಲಿದ್ದರು ಎಂದು ಸಯಾನಿ ಗುಪ್ತಾ ಹೇಳಿರುವುದಾಗಿ' ಎನ್‌ಡಿಟಿವಿ ವರದಿ ಮಾಡಿದೆ.
'ಕೆಲಸ ಬಿಟ್ಟು ಸಿನಿಮಾಗಳಲ್ಲಿ ನಟಿಸ್ತೀನಿ ಎಂದಿದ್ದಕ್ಕೆ, ನನ್ನನ್ನು ಕೋಣೆಯಲ್ಲಿ ಬಂಧಿಸಿದ್ದರು. ನನ್ನೊಡನೆ ಕೆಲವು ತಿಂಗಳು ಮಾತು ಬಿಟ್ಟರು. ಆದಾಗ್ಯೂ ನಾನು ನನ್ನ ಕನಸನ್ನು ಬೆನ್ನತ್ತಿ ಹೊರಟೆ. ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಪುಣೆಯಲ್ಲಿ (ಎಫ್‌ಟಿಐಐ) ತರಬೇತಿ ಪಡೆದು ಬಳಿಕ ಸಿನಿಮಾ ರಂಗಕ್ಕೆ ಬಂದೆ' ಎಂದು ತಮ್ಮ ಜೀವನದ ಅನುಭವವನ್ನು ಮೆಲುಕು ಹಾಕಿದ್ದಾರೆ.
'ಒಂದು ದಿನ ನನ್ನ ತಾಯಿ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಬಂದರು. ಅಲ್ಲಿನ ವಾತಾವರಣ, ಸನ್ನಿವೇಶಗಳು ನಟಿಯರ ಮೇಲಿನ ಅಭಿಪ್ರಾಯ ಸೇರಿದಂತೆ ಆಕೆಯ ದೃಷ್ಟಿಕೋನವನ್ನೇ ಬದಲಾಯಿಸಿತು. ಅಲ್ಲಿಂದಲೇ ನನಗೆ ಅವಕಾಶಗಳು ಸಿಕ್ಕಿತ್ತು' ಎಂದು ಸಯಾನಿ ಗುಪ್ತಾ ಹೇಳಿದ್ದಾರೆ.
'ಡೆಲ್ಲಿ ಕ್ರೈಮ್', 'ಫೋರ್ ಮೋರ್ ಶಾಟ್ಸ್ ಪ್ಲೀಸ್' ವೆಬ್ ಸರಣಿ, 'ಡಿಯರ್ ಮೆನ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.