ADVERTISEMENT

ಪ್ರೀತಿಗಾಗಿ ಭಾರತಕ್ಕೆ ಬಂದ ಪಾಕ್‌ನ ಸೀಮಾ ಹೈದರ್ ‘ರಾ’ ಏಜೆಂಟ್ ಆಗಿ ಬಾಲಿವುಡ್‌ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2023, 10:56 IST
Last Updated 3 ಆಗಸ್ಟ್ 2023, 10:56 IST
   

–ಎನ್.ಪಿ. ಜಯರಾಮನ್

ಬೆಂಗಳೂರು: ಪ್ರಿಯತಮನನ್ನು ಭೇಟಿ ಮಾಡಲು ನೇಪಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಭಾರಿ ಸುದ್ದಿ ಮಾಡಿದ್ದರು. ಆನ್‌ಲೈನ್‌ ಮೊಬೈಲ್ ಗೇಮ್ ಪಬ್‌ಜಿಯಲ್ಲಿ ಸಂಪರ್ಕಕ್ಕೆ ಸಿಕ್ಕಿದ್ದ ನೋಯ್ಡಾ ಸಚಿನ್ ಮೀನಾ ಜೊತೆ ಪ್ರೇಮಾಂಕುರವಾಗಿ 4 ಮಕ್ಕಳ ಜೊತೆ ಭಾರತಕ್ಕೆ ಬಂದಿದ್ದರು.

ಈಗ ಬರುತ್ತಿರುವ ವರದಿಗಳನ್ನು ನಂಬುವುದಾದರೆ, ಪಾಕಿಸ್ತಾನದ ಐಎಸ್‌ಐ ಏಜೆಂಟ್ ಇರಬಹುದು ಎಂದು ಶಂಕಿಸಲಾಗಿದ್ದ ಸೀಮಾ ಹೈದರ್, ರಾ ಏಜೆಂಟ್ ಪಾತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರೆ.

ADVERTISEMENT

ಚಿತ್ರ ನಿರ್ಮಾಣ ಸಂಸ್ಥೆ ಜಾನಿ ಫೈರ್‌ಫಾಕ್ಸ್, ‘ಎ ಟೈಲರ್ ಮರ್ಡರ್ ಸ್ಟೋರಿ’ ಚಿತ್ರದಲ್ಲಿ ನಟಿಸುವಂತೆ ಈಗಾಗಲೇ ಸೀಮಾ ಅವರನ್ನು ಸಂಪರ್ಕಿಸಿದೆ. ಈ ಕಥೆಯು ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯ ಹತ್ಯೆಗೆ ಸಂಬಂಧಿಸಿದ್ದಾಗಿದೆ. ಚಿತ್ರದಲ್ಲಿ ಸೀಮಾಗೆ ರಾ ಏಜೆಂಟ್ ಪಾತ್ರದ ಆಫರ್ ಕೊಡಲಾಗಿದೆ.

ನಿರ್ಮಾಪಕರು ಸೀಮಾಳನ್ನು ಸಂಪರ್ಕಿಸಿದ್ದು, ಮಾತುಕತೆ ನಡೆಸಿದ್ದಾರೆ. ಆಕೆಯನ್ನು ಪಾತ್ರಕ್ಕೆ ಅಂತಿಮಗೊಳಿಸುವ ಮುನ್ನ ಅವರು ಆಡಿಷನ್ ಕೂಡ ನಡೆಸಿದ್ದಾರೆ. ನಿರ್ಮಾಪಕ ಅಮಿತ್ ಜಾನಿ ಆಗಸ್ಟ್ 2 ರಂದು ಗ್ರೇಟರ್ ನೋಯ್ಡಾದಲ್ಲಿ ಸೀಮಾ ಮತ್ತು ಸಚಿನ್ ಅವರನ್ನು ಭೇಟಿ ಮಾಡಿದ್ದಾರೆ.

ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಜೊತೆ ಮಾತನಾಡಿರುವ ಅಮಿತ್ ಜಾನಿ, ‘ಸೀಮಾ ಅವರು ಕೆಲಸ ಹುಡುಕುತ್ತಿದ್ದಾರೆ ಎಂದು ತಿಳಿದ ನಂತರ ನಾವು ಅವರನ್ನು ಸಂಪರ್ಕಿಸಿದೆವು. ಚಿತ್ರದಲ್ಲಿ ನಟಿಸುವ ಕುರಿತಂತೆ ಅವರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದೇವೆ. ನಾನು ನಿನ್ನೆ ಸಂಜೆ ಅವರ ನಿವಾಸಕ್ಕೆ ಭೇಟಿ ನೀಡಿ ಔಪಚಾರಿಕವಾಗಿ ಅವರನ್ನು ಆಹ್ವಾನಿಸಿದೆ. ಸೆಪ್ಟೆಂಬರ್‌ನಲ್ಲಿ ಸೀಮಾ ಅವರು ನಟಿಸುವ ಚಿತ್ರದ ಭಾಗಗಳ ಚಿತ್ರೀಕರಣ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಅಧಿಕ ಪ್ರಮಾಣದ ಚಿತ್ರೀಕರಣ ನಡೆಯಲಿದೆ. ನಾನು ಸದ್ಯಕ್ಕೆ ಇದಕ್ಕಿಂತ ಹೆಚ್ಚಿನದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಅವರ ಪಾತ್ರವು ತುಂಬಾ ಗಂಭೀರವಾಗಿದೆ’ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.