
ಜೋಸೈಮನ್
ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಗರದ ಮಲ್ಲಿಗೆ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಅವರಿಗೆ 80 ವರ್ಷವಾಗಿತ್ತು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮತ್ತೋರ್ವ ಪುತ್ರ ಈಗಾಗಲೇ ತೀರಿಕೊಂಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಅವರು, ಶುಕ್ರವಾರ ಸಮಿತಿಯ ತುರ್ತು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿಯೇ ಕುಸಿದು ಬಿದ್ದ ಅವರನ್ನು ತಕ್ಷಣ ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಅವರು ನಿರ್ದೇಶಕ, ನಟ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. 1977ರಲ್ಲಿ ‘ಒಂದು ಪ್ರೇಮದ ಕತೆ’ ಚಿತ್ರದೊಂದಿಗೆ ನಿರ್ದೇಶಕರಾದ ಸೈಮನ್, ವಿಷ್ಣುವರ್ಧನ್, ಅಂಬರೀಶ್ ಅವರ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ‘ಸಿಂಹ ಜೋಡಿ’, ‘ಸಾಹಸ ಸಿಂಹ’, ‘ಹಾಂಕಾಂಗಿನಲ್ಲಿ ಏಜೆಂಟ್ ಅಮರ್’, ‘ಸ್ನೇಹದ ಕಡಲಲ್ಲಿ’, ‘ರವಿವರ್ಮ’, ‘ಟೈಂ ಬಾಂಬ್’ ಮುಂತಾದವು ಇವರ ನಿರ್ದೇಶನದ ಪ್ರಮುಖ ಸಿನಿಮಾಗಳಾಗಿವೆ.
ಇವರು ಪ್ರಸ್ತುತ ನಿರ್ದೇಶಕರ ಸಂಘದ ಉಪಾಧ್ಯಕ್ಷರಾಗಿದ್ದರು. ಮಂಡ್ಯ ಮೂಲದ ಇವರು ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಸಹಾಯಕಾಗಿ ವೃತ್ತಿ ಪ್ರಾರಂಭಿಸಿದ್ದರು.
‘ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಲಘು ಉಪಾಹಾರ ನೀಡಲಾಯಿತು. ಎಲ್ಲರೂ ತಿಂದು, ಕೈತೊಳೆದುಕೊಂಡು ಬಂದು ತಮ್ಮ ಜಾಗಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಆ ವೇಳೆ ಜೋ ಸೈಮನ್ ಅವರು ಏದುಸಿರು ಬಿಡುತ್ತ ಕುರ್ಚಿ ಮೇಲೆ ಕುಳಿತರು. ಅದನ್ನು ಗಮನಿಸಿದ ನಾವು ತಕ್ಷಣ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ದೆವು. ಚಿಕಿತ್ಸೆ ಫಲಿಸಲಿಲ್ಲ. 80 ವರ್ಷವಾಗಿದ್ದರೂ ಸ್ಫೂರ್ತಿ ಚಿಲುಮೆಯಂತೆ ನಗುತ್ತಾ, ಎಲ್ಲರೊಂದಿಗೆ ಓಡಾಡಿಕೊಂಡಿದ್ದರು. ಅವರನ್ನು ಕಣ್ಣಮುಂದೆಯೇ ಹೀಗೆ ಕಳೆದುಕೊಂಡಿದ್ದು ತೀವ್ರ ಬೇಸರ ಉಂಟು ಮಾಡಿದೆ’
–ಕೆ. ಮಂಜು, ಚಲನಚಿತ್ರ ನಿರ್ಮಾಪಕ
ರವೀಂದ್ರ ಕಲಾಕ್ಷೇತ್ರದಲ್ಲಿ ಫೆ.14ರಂದು ಬೆಳಿಗ್ಗೆ 10 ಗಂಟೆಯಿಂದ ಒಂದು ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ’ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.