
ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಕೊಲ್ಕತ್ತ ನೈಟ್ ರೈಡರ್ಸ್ (KKR) ಫ್ರಾಂಚೈಸಿ, ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ₹9.20 ಕೋಟಿ ನೀಡಿ ಖರೀದಿಸಿರುವುದಕ್ಕೆ ಉತ್ತರ ಪ್ರದೇಶದ ಮಾಜಿ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರಿಗೆ ₹9.20 ಕೋಟಿ ಕೊಟ್ಟು ಖರೀದಿಸಿದ್ದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದಿನೇ ದಿನೇ ದೌರ್ಜನ್ಯಗಳು ಹೆಚ್ಚುತ್ತಿರುವುದರಿಂದ ಉತ್ತರ ಪ್ರದೇಶದ ಬಿಜಿಪಿ ಮುಖಂಡ ಹಾಗೂ ಮಾಜಿ ಶಾಸಕ ಸಂಗೀತ್ ಸೋಮ್ ಅವರು ನಟ ಶಾರುಖ್ ಖಾನ್ ಅವರನ್ನು ‘ದೇಶದ್ರೋಹಿ’ ಎಂದು ಕರೆದಿದ್ದಾರೆ.
‘ಒಂದು ಕಡೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ಮತ್ತೊಂದೆಡೆ ಆ ದೇಶದ ಆಟಗಾರರಿಗೆ ಐಪಿಎಲ್ ಆಡಲು ಕೋಟಿ ಕೋಟಿ ಹಣ ಕೊಟ್ಟು ಖರೀದಿಸಲಾಗುತ್ತಿದೆ. ದೇಶದ್ರೋಹಿ ಶಾರುಖ್ ಖಾನ್ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್‌ನನ್ನು ₹9.20 ಕೋಟಿಗೆ ಖರೀದಿಸಿದ್ದಾರೆ. ಆ ದೇಶದ್ರೋಹಿಗೆ ಈ ದೇಶದಲ್ಲಿ ವಾಸಿಸುವ ಹಕ್ಕಿಲ್ಲ’ ಎಂದು ಮೀರತ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೋಮ್ ಕಿಡಿಕಾರಿದ್ದಾರೆ.
’ಈ ದೇಶದ ಜನರು ನಿಮಗೆ ಉನ್ನತ ಸ್ಥಾನ ತಲುಪಲು ಸಹಾಯ ಮಾಡಿದ್ದಾರೆ. ನೀವು ಗಳಿಸಿರುವ ಪ್ರತಿಯೊಂದು ರೂಪಾಯಿ ಈ ದೇಶದ್ದು. ಆದರೆ, ನೀವು ಬಾಂಗ್ಲಾದೇಶದ ಆಟಗಾರನಿಗೆ ಕೋಟ್ಯಂತರ ರೂಪಾಯಿ ನೀಡುವ ಮೂಲಕ ಈ ದೇಶಕ್ಕೆ ದ್ರೋಹ ಮಾಡಿದ್ದೀರಿ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.