ಶಾಹೀದ್ ಕಪೂರ್–ಕರೀನಾ ಕಪೂರ್ ಖಾನ್
ಪಿಟಿಐ
ಮುಂಬೈ: ಬಾಲಿವುಡ್ ನಟ ಶಾಹೀದ್ ಕಪೂರ್ ಮತ್ತು ನಟಿ ಕರೀನಾ ಕಪೂರ್ ಖಾನ್ ಅವರು ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ.
ಜೈಪುರದಲ್ಲಿ ನಡೆಯುತ್ತಿರುವ IIFA–2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪತ್ರಿಕಾಗೋಷ್ಠಿಯಲ್ಲಿ ಇಬ್ಬರು ಜೊತೆಯಾಗಿದ್ದು, ಆತ್ಮೀಯವಾಗಿ ಮಾತನಾಡಿದ್ದಾರೆ.
2004ರಲ್ಲಿ ಹಿಂದಿಯ ‘ಫಿದಾ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ ಇದೇ ವೇಳೆ ಪ್ರೀತಿಯಲ್ಲಿ ಬಿದ್ದಿದ್ದರು. ಶಾಹೀದ್ ಅವರನ್ನು ಪ್ರೀತಿಸುತ್ತಿರುವುದಾಗಿ ಸ್ವತಃ ಕರೀನಾ ಅವರೇ ಹೇಳಿದ್ದರು. 2008ರಲ್ಲಿ ‘ಜಬ್ ವಿ ಮೆಟ್’ ಚಿತ್ರದ ಚಿತ್ರೀಕರಣದ ಸಂದರ್ಭ ಈ ಜೋಡಿಯ ಸಂಬಂಧದಲ್ಲಿ ಬಿರುಕು ಮೂಡಿ ದೂರವಾಗಿದ್ದರು.
ಅದಾದ ಬಳಿಕ ಶಾಹೀದ್ ಅವರು ಮೀರಾ ಕಪೂರ್ ಅವರನ್ನು ಮದುವೆಯಾಗಿದ್ದು, ಕರೀನಾ ಅವರು ನಟ ಸೈಫ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸರಿಸುಮಾರು 18 ವರ್ಷಗಳಲ್ಲಿ ಶಾಹೀದ್ ಮತ್ತು ಕರೀನಾ ಅವರು ಸಾರ್ವಜನಿಕವಾಗಿ ವೇದಿಕೆ ಹಂಚಿಕೊಂಡಿರುವುದಾಗಲಿ, ಮಾತನಾಡಿರುವುದಾಗಿ ಮಾಧ್ಯಮಗಳ ದೃಷ್ಟಿಗೆ ಬಿದ್ದಿರಲಿಲ್ಲ.
2016ರಲ್ಲಿ ಬಿಡುಗಡೆಯಾದ ‘ಉಡ್ತಾ ಪಂಜಾಬ್’ ಸಿನಿಮಾದಲ್ಲಿ ಇಬ್ಬರು ನಟಿಸಿದ್ದರೂ, ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೇ 2024ರಲ್ಲಿ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಬ್ಬರು ಭಾಗವಹಿಸಿದ್ದರೂ ಒಬ್ಬರಿಗೊಬ್ಬರು ಮಾತನಾಡಿರುವುದಾಗಲಿ, ಒಟ್ಟಿಗೆ ವೇದಿಕೆ ಹಂಚಿಕೊಂಡಿರುವುದಾಗಲಿ ಮಾಡಿರಲಿಲ್ಲ.
ಸುಮಾರು ವರ್ಷಗಳ ಬಳಿಕ ಗೀತ್–ಆದಿತ್ಯ(ಜಬ್ ವಿ ಮೆಟ್ ಚಿತ್ರದಲ್ಲಿನ ಪಾತ್ರದ ಹೆಸರು) ಜೋಡಿ ಒಂದಾಗಿರುವುದು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಇದರಲ್ಲೇನು ವಿಶೇಷವಿಲ್ಲ: ಶಾಹೀದ್
ಕರೀನಾ ಅವರ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಹೀದ್, ಇದರಲ್ಲಿ ಅಂತಹ ವಿಶೇಷವೇನು ಇಲ್ಲ ಎಂದಿದ್ದಾರೆ
‘ಸಾಮಾನ್ಯವಾಗಿ ನಾವಿಬ್ಬರೂ ಭೇಟಿಯಾಗುತ್ತಲೇ ಇರುತ್ತೇವೆ. ಇದು ಹೊಸತೇನಲ್ಲ...ಇವತ್ತು ವೇದಿಕೆಯಲ್ಲಿ ಭೇಟಿಯಾಗಿದ್ದೇವೆ. ಹಾಗೆಯೇ ಅಲ್ಲಿ–ಇಲ್ಲಿ ಸಾಮಾನ್ಯವಾಗಿ ಭೇಟಿಯಾಗುತ್ತೇವೆ’ ಎಂದಿದ್ದಾರೆ.
ಫಿಧಾ, ಜಬ್ ವಿ ಮೆಟ್, ಚುಪ್ ಚುಪ್ ಕೇ ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಜೋಡಿ ಕಮಾಲ್ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.