
ಮುಂಬೈ: ₹60 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಉದ್ಯಮಿಯೊಬ್ಬರಿಗೆ ₹60 ಕೋಟಿ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಜುಹು ಠಾಣೆಯಲ್ಲಿ ದಂಪತಿ ವಿರುದ್ಧ ಆ.14ರಂದು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಪ್ರಕರಣ ದಾಖಲಿಸಿತ್ತು.
'ಎಫ್‌ಐಆರ್ ರದ್ದುಗೊಳಿಸುವಂತೆ ಕೋರುವುದರ ಜೊತೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸದಂತೆ ಹಾಗೂ ಅರ್ಜಿಗಳ ವಿಚಾರಣೆ ನಡೆಯುವವರೆಗೆ ನಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ' ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ಪೀಠವು ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿದೆ.
ಕಂಪನಿಯ ಕುಸಿತಕ್ಕೆ ಅನಿರೀಕ್ಷಿತ ಆರ್ಥಿಕ ಪರಿಸ್ಥಿತಿಗಳು ಕಾರಣ. ಉದ್ಯಮ ಮತ್ತು ಹೂಡಿಕೆಯಲ್ಲಿ ನಷ್ಟವಾಗಿದೆ ಹೊರತು ನಾವು ವಂಚಿಸಿಲ್ಲ ಎಂದು ದಂಪತಿ ಅರ್ಜಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.