ಶೋಲೆ ಸಿನಿಮಾದಲ್ಲಿದ್ದ ಬೈಕ್
ಭಾರತೀಯ ಸಿನಿಮಾದಲ್ಲಿ ಬಾಲಿವುಡ್‌ನ ‘ಶೋಲೆ’ ಮೈಲಿಗಲ್ಲು ಸೃಷ್ಟಿಸಿದ ಹಾಗೂ ಸದಾ ನೆನಪಿನಲ್ಲುಳಿಯುವ ಚಿತ್ರ. ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕರ್ನಾಟಕ ಸರ್ಕಾರ, ಶೋಲೆಯಲ್ಲಿ ಬಳಸಿದ ಮೋಟಾರ್ ಸೈಕಲ್ ಅನ್ನು ಪ್ರದರ್ಶನಕ್ಕೆ ಇರಿಸಿತ್ತು. ಈ ಬೈಕ್ ಸದ್ಯ ಕರ್ನಾಟಕದವರೇ ಆದ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರ ಬಳಿ ಇದೆ. 2022ರಲ್ಲಿ ಅತೀಕ್ ಅವರು ಈ ಬೈಕ್ ಅನ್ನು ಖರೀದಿಸಿದ್ದಾರೆ.
ಶೋಲೆಯ ಜನಪ್ರಿಯ ಗೀತೆ ‘ಯೇ ದೋಸತಿ ಹಮ್ ನಹಿ ತೋಡೆಂಗೆ’ ಗೀತೆಯಲ್ಲಿ ಅಮಿತಾಬ್ ಮತ್ತು ಧರ್ಮೇಂದ್ರ ಜತೆಗೂಡಿ ಹಾಡುತ್ತಾ ಸಾಗುವ ಸನ್ನಿವೇಶದಲ್ಲಿ ಈ ಬೈಕ್ ಬಳಸಲಾಗಿತ್ತು. 80 ವರ್ಷ ಹಳೆಯದಾದ ಈ ಬೈಕ್ ಈಗಲೂ ಸಣ್ಣ ಪುಟ್ಟ ರೈಡ್‌ಗೆ ಯೋಗ್ಯವಾಗಿದೆ ಎನ್ನುತ್ತಾರೆ ಅತೀಕ್.
ಸದ್ಯ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ನ ಅಧ್ಯಕ್ಷರಾಗಿರುವ ಅತೀಕ್ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಆ ಬೈಕ್ ಇನ್ನೂ ಸುಸ್ಥಿತಿಯಲ್ಲಿದೆ ಎನ್ನುವುದು ಜನರಿಗೆ ತಿಳಿದಿಲ್ಲ. ಆದರೆ ಶೋಲೆ ಸಿನಿಮಾದಲ್ಲಿ ನಟಿಸಿದ್ದ ನಟ ಧರ್ಮೇಂದ್ರ ಅವರ ನಿಧನದ ನಂತರ ಈ ಬೈಕ್ ಬಗ್ಗೆ ಕುತೂಹಲ ಮೂಡಿತ್ತು ಎಂದಿದ್ದಾರೆ.
ಎಲ್.ಕೆ.ಅತೀಕ್ ಅವರ ಬಳಿ ಇರುವ ಶೋಲೆ ಸಿನಿಮಾದಲ್ಲಿದ್ದ ಬೈಕ್
ಮಿಲಿಟರಿ ಮೂಲ
ಈ ಬೈಕ್ ಮೂಲತಃ ಮಿಲಿಟರಿ ವಾಹನವಾಗಿದ್ದು ಬಿರ್ಮಿಂಗಮ್ ಸ್ಮಾಲ್ ಆರ್ಮ್ಸ್ (ಬಿಎಸ್‌ಎ) ಕಂಪನಿ ತಯಾರಿಸಿದೆ. ಇದು ಬಿಎಸ್‌ಎWM20 ಮಾಡೆಲ್ ಆಗಿದ್ದು 1942ರಲ್ಲಿ ಎರಡನೇ ವಿಶ್ವಯುದ್ಧದ ಕಾಲದ ಬೈಕ್ ಆಗಿದೆ. ಈ ಬೈಕ್ ಮೈಸೂರು ನೋಂದಣಿ ಸಂಖ್ಯೆಯನ್ನು ಹೊಂದಿದೆ. MYB 3047 ನಂಬರ್‌ನ ಈ ಬೈಕ್, ಶೋಲೆಯಲ್ಲಿ ‘ಯೇ ದೋಸತಿ’ ಹಾಡಿನಲ್ಲಿ ರಾಮನಗರದಲ್ಲಿ ಚಲಿಸುವ ದೃಶ್ಯವಿದೆ. ಆರು ನಿಮಿಷಗಳ ಕಾಲ ಈ ಬೈಕ್ ಕಾಣಿಸಿಕೊಳ್ಳುತ್ತದೆ.
ಅತೀಕ್ ಅವರು ಮೋಟಾರ್ ಸೈಕಲ್ ಪ್ರೇಮಿ. ಸ್ನೇಹಿತರ ಬಳಿ ಶೋಲೆ ಬೈಕ್ ಮಾರಾಟಕ್ಕಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕುತೂಹಲದಿಂದ ಖರೀದಿಸಿದ್ದಾರೆ.
ಈ ಬೈಕ್ ನೋಡಿಕೊಳ್ಳುತ್ತಿದ್ದ ಬೆಂಗಳೂರಿನ ಅಂಜನ್ ರೆಡ್ಡಿ ಅವರಿಂದ ಅತೀಕ್ ಖರೀದಿಸಿದ್ದಾರೆ. ಈ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಆರ್‌ಟಿಒ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬೈಕ್ ಜತೆಗೆ 1975ರಲ್ಲಿ ತೆರೆಕಂಡ ಶೋಲೆ ಸಿನಿಮಾದ ಟಿಕೆಟ್‌ವೊಂದನ್ನು ಅತೀಕ್ ಪಡೆದುಕೊಂಡಿದ್ದಾರೆ.
ಕೆಲವು ಬಿಡಿಭಾಗಗಳು ನಾಪತ್ತೆ
ಶೋಲೆ ಬಿಡುಗಡೆಯಾದಾಗ ನನ್ನ ವಯಸ್ಸು 10. ಬೈಕ್ ಸಿಕ್ಕಾಗ, ಸಿನಿಮಾದಲ್ಲಿ ಕಂಡಂತೆ ಇರಲಿಲ್ಲ ಎನ್ನುವ ಅತೀಕ್, ಬೈಕ್‌ನ ಕೆಲವು ಬಿಡಿಭಾಗಗಳು ಇರಲಿಲ್ಲ ಎಂದಿದ್ದಾರೆ. ಸೈಡ್ ಕಾರ್ ನಾಪತ್ತೆಯಾಗಿತ್ತು. ಬಣ್ಣ ಮಾಸಿತ್ತು. ಸ್ಥಳೀಯ ಮೆಕ್ಯಾನಿಕ್ ಒಬ್ಬರು ಚೆನ್ನೈನಂತಹ ನಗರಗಳಲ್ಲಿ ಬಿಎಸ್‌ಎ ಸಂಪರ್ಕಿಸಿ ಬಿಡಿಭಾಗಗಳನ್ನು ತರಿಸಿಕೊಂಡು ಬೈಕ್ ಸರಿಪಡಿಸಿದ್ದರು. ಇದಕ್ಕೆ ಆರು ತಿಂಗಳು ಸಮಯ ಹಿಡಿದಿತ್ತು. ನಂತರ ಬೆಂಗಳೂರಿನಲ್ಲಿ ಸಣ್ಣ ರೈಡ್ ಹೋಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಸೆಲ್ಫಿ ಸ್ಪಾಟ್
ಅತೀಕ್ ಅವರು ಸದ್ಯ ಬೈಕ್ ಅನ್ನು ತಮ್ಮ ಲಿವಿಂಗ್ ರೂಮ್‌ನಲ್ಲಿ ಇರಿಸಿದ್ದು, ಮನೆಗೆ ಬಂದವರಿಗೆ ಸೆಲ್ಫಿ ಪಾಯಿಂಟ್ ಆಗಿದೆ ಎನ್ನುವ ಅತೀಕ್, ಬೈಕ್ ಅನ್ನು ಮಾರುವ ಯೋಚನೆಯಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.