
ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಸಿಲ್ಲಿಲಲ್ಲಿ’ಯ ‘ಗೋವಿಂದ’ನ ಪಾತ್ರದಲ್ಲಿ ಮಿಂಚಿದ್ದ ನಟ ಸಂಗಮೇಶ ಉಪಾಸೆ ನಿರ್ದೇಶನಕ್ಕೆ ಇಳಿದಿದ್ದಾರೆ.
‘ಗಲಿಬಿಲಿ ಗೋವಿಂದ’ ಸಿನಿಮಾದ ಮುಹೂರ್ತ ಇತ್ತೀಚೆಗೆ ಚಡಚಣ ಸಮೀಪವಿರುವ ಇಂಚಗೇರಿ ಮಠದಲ್ಲಿ ನಡೆಯಿತು. ಧಾರಾವಾಹಿಯಲ್ಲಿ ‘ಅರ್ಥವಾಯಿತು ಬಿಡಿ..’ ಎನ್ನುವ ಸಂಭಾಷಣೆ ಮೂಲಕ ನಗಿಸುತ್ತಿದ್ದ ಸಂಗಮೇಶ, ಹಲವು ಸಿನಿಮಾಗಳಲ್ಲಿ ಹಾಸ್ಯಪಾತ್ರಗಳನ್ನು ನಿಭಾಯಿಸಿದ್ದಾರೆ. ಇವೆಲ್ಲದರ ಅನುಭವದ ಹೂರಣವಾಗಿ ಈ ಸಿನಿಮಾ ತೆರೆಗೆ ಬರಲಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಮುಖ್ಯ ಪಾತ್ರದಲ್ಲೂ ಸಂಗಮೇಶ ನಟಿಸುತ್ತಿದ್ದಾರೆ. ಅಂಬರೀಷ ಬಣಜಿಗೇರ, ಸಂದೀಪ್ ರಾಠೋಡ್, ಚಿದಾನಂದ ಪರಗೊಂಡ, ಮಡಿವಾಳಪ್ಪ.ಎಂ.ಗೋಗಿ ಮತ್ತು ಚಿದಾನಂದ ಪತ್ತಾರ ಜಂಟಿಯಾಗಿ ಈ ಸಿನಿಮಾಕ್ಕೆ ಬಂಡವಾಳ ಹೂಡುತಿದ್ದಾರೆ. ‘ನಗುವವರಿಗೆ ಮಾತ್ರ’ ಎಂಬ ಅಡಿಬರಹವಿದೆ.
‘ಗೋವಿಂದ’ ಪಾತ್ರ ಜನರ ಮನಸ್ಸಿನಲ್ಲಿ ಉಳಿದಿರುವ ಕಾರಣ ಅದನ್ನೇ ಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಮಾಡಿಕೊಳ್ಳಲಾಗಿದೆ’ ಎಂದಿದ್ದಾರೆ ಸಂಗಮೇಶ. ‘ಗ್ರಾಮೀಣ ಭಾಗದಲ್ಲಿ ಅನಾಥ ಮಕ್ಕಳ ಕುರಿತು, ಅವರ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಹಾಗೂ ಮಕ್ಕಳು ಇದ್ದವರು, ಇಲ್ಲದವರ ಪೋಷಕರ ಪಾಡು ಹೇಗಿರುತ್ತದೆ ಎಂಬುದನ್ನು ಹಾಸ್ಯ ಧಾಟಿಯಲ್ಲಿ ತೋರಿಸಲಾಗುವುದು. ಎಲ್ಲರಿಗೂ ಮನಮುಟ್ಟುವಂತಹ ಸಂದೇಶವೂ ಸಿನಿಮಾದಲ್ಲಿರಲಿದೆ. ಹೊರ್ತಿ, ಅಂಜುಟಗಿ, ವಿಜಯಪುರ, ಇಂಡಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಕಲಾವಿದರ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು’ ಎಂದಿದ್ದಾರೆ ಸಂಗಮೇಶ ಉಪಾಸೆ.
ಚಿತ್ರಕ್ಕೆ ಪಳನಿ ಡಿ.ಸೇನಾಪತಿ ಸಂಗೀತ, ಆನಂದ ದಿಂಡ್ವರ್ ಛಾಯಾಚಿತ್ರಗ್ರಹಣ, ರವಿತೇಜ್ ಸಿ.ಎಚ್ ಸಂಕಲನ, ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನವಿರಲಿದೆ.