ADVERTISEMENT

‘ಚಂದಕ್ಕಿಂತ ಚಂದ ನೀನೆ ಸುಂದರ’ ಗಾಯಕ ಪಂಕಜ್‌ ಉಧಾಸ್‌ ಇನ್ನಿಲ್ಲ

ಘಜಲ್‌ ಗಾಯಕ ಪಂಕಜ್‌ ಉಧಾಸ್‌ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2024, 11:53 IST
Last Updated 26 ಫೆಬ್ರುವರಿ 2024, 11:53 IST
<div class="paragraphs"><p>ಪಂಕಜ್‌ ಉಧಾಸ್‌</p></div>

ಪಂಕಜ್‌ ಉಧಾಸ್‌

   

ಮುಂಬೈ: ಸ್ಪರ್ಶ ಚಿತ್ರದ ‘ಬರೆಯದ ಮೌನ ಕವಿತೆ’, ‘ಚಂದಕ್ಕಿಂತ ಚಂದ ನೀನೆ ಸುಂದರ’ ಸೇರಿದಂತೆ ಕನ್ನಡ, ಹಿಂದಿ ಭಾಷೆಗಳಲ್ಲಿ ಹಿನ್ನೆಲೆ ಗಾಯಕರಾಗಿದ್ದ, ಘಜಲ್‌ ಗಾಯಕ ಪಂಕಜ್‌ ಉಧಾಸ್‌ (72) ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ಮುಂಬೈನಲ್ಲಿ ನಿಧನರಾದರು.

ಗುಜರಾತ್‌ನ ಜೆತಪುರ ದಲ್ಲಿ 1951, ಮೇ 17 ರಂದು ಜನಿಸಿದ ಪಂಕಜ್‌ ಅವರದ್ದು ಸಂಗೀತ ಹಿನ್ನೆಲೆಯ ಕುಟುಂಬ. ಪಂಕಜ್‌ ಅವರ ಸಹೋದರ  ಮನ್ಹಾರ್‌ ಉಧಾಸ್‌ ಅವರು ಕೂಡ ಗಾಯಕರಾಗಿದ್ದಾರೆ. ಒಬ್ಬರೇ 60 ಕ್ಕೂ ಹೆಚ್ಚು ಆಲ್ಬಮ್‌ ಬಿಡುಗಡೆ ಮಾಡಿದ ಖ್ಯಾತಿ ಪಂಕಜ್‌ ಅವರಿಗೆ ಸಲ್ಲುತ್ತದೆ.

ADVERTISEMENT

1980ರಲ್ಲಿ ‘ಆಹತ್‌’ ಎನ್ನುವ ಘಜಲ್‌ ಆಲ್ಬಮ್‌ ಹೊರತಂದಿದ್ದರು, ಅಲ್ಲಿಂದ ಆರಂಭವಾದ ಅವರ ಘಜಲ್‌ ಪಯಣ ಮುಂದುವರಿದು, ಮುಕರಾರ್‌. ಮೆಹಫಿಲ್‌ನಂತಹ ಜನಪ್ರಿಯ ಘಜಲ್‌ಗಳನ್ನು ಕೇಳುಗರಿಗೆ ಪರಿಚಯಿಸಿದ್ದಾರೆ.

ಹಿನ್ನೆಲೆ ಗಾಯಕರೂ ಆಗಿದ್ದ ಪಂಕಜ್‌, 1986 ರ ಕ್ರೈಮ್ ಥ್ರಿಲ್ಲರ್ ‘ನಾಮ್‌’ ಚಿತ್ರದ ‘ಚಿಟ್ಟಿ ಆಯಿ ಹೈ’ ಹಾಡಿನ ಮೂಲಕ ಇನ್ನಷ್ಟು ಜನಪ್ರಿಯರಾದರು.

1990ರಲ್ಲಿ ಲತಾ ಮಂಗೇಶ್ಕರ್‌ ಅವರೊಂದಿಗೆ ಹಾಡಿದ ‘ಘಯಾಲ್‌’ ಚಿತ್ರದ ‘ಮಾಹಿಯಾ ತೇರಿ ಕಸಮ್‌’ ಹಾಡು ಕೂಡ ಜನಪ್ರಿಯತೆ ಗಳಿಸಿತ್ತು.

ಕನ್ನಡದ ಸ್ಪರ್ಶ, ಹಿಂದಿಯ ‘ಸಾಜನ್‌’, ‘ನಾಮ್‌’, ‘ಫಿರ್‌ ತೇರಿ ಕಹಾನಿ ಯಾದ್‌ ಆಯಿ’ ಸೇರಿ ಅನೇಕ ಚಿತ್ರಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ

ಪಂಕಜ್‌ ಅವರ ಹಾಡಿಗೆ ಹಲವು ಫಿಲ್ಮ್ಂ ಫೇರ್‌ ಪ್ರಶಸ್ತಿಗಳು, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ದೊರಕಿದೆ.

ಪಂಕಜ್‌ ಉಧಾಸ್‌ ಅವರ ನಿಧನಕ್ಕೆ ರಾಜಕೀಯ, ಸಿನಿಮಾ ಹಾಗೂ ಸಂಗೀತ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.