ADVERTISEMENT

ಕನ್ನಡಕ್ಕೆ ಅವಮಾನ: ಸೋನು ನಿಗಮ್‌ಗೆ ಅಸಹಕಾರ ತೋರಲು ಕನ್ನಡ ಚಿತ್ರರಂಗ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಮೇ 2025, 11:38 IST
Last Updated 5 ಮೇ 2025, 11:38 IST
<div class="paragraphs"><p>ಸೋನು ನಿಗಮ್</p></div>

ಸೋನು ನಿಗಮ್

   

ಬೆಂಗಳೂರು: ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದ್ದನ್ನು ಪಹಲ್ಗಾಮ್‌ ಭಯೋತ್ಪಾದನಾ ದಾಳಿಗೆ ತಳುಕು ಹಾಕಿದ ಗಾಯಕ ಸೋನು ನಿಗಮ್‌ಗೆ ಅಸಹಕಾರ ತೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (ಕೆಎಫ್‌ಸಿಸಿ) ನಿರ್ಧರಿಸಿದೆ.

ಯಾರೂ ಸೋನು ನಿಗಮ್‌ ಅವರನ್ನು ಹಾಡಿಸಲು ಕರೆಯಬಾರದು, ಮ್ಯೂಸಿಕಲ್‌ ನೈಟ್‌ ಸೇರಿದಂತೆ ಅವರ ಜೊತೆಗೆ ಯಾವುದೇ ಚಟುವಟಿಕೆ ಮಾಡಕೂಡದು ಎಂದು ಮಂಡಳಿ ಅಧ್ಯಕ್ಷ ನರಸಿಂಹಲು ಎಂ. ತಿಳಿಸಿದ್ದಾರೆ.

ADVERTISEMENT

ಸಂಗೀತ ನಿರ್ದೇಶಕರು, ನಿರ್ಮಾಪಕರು, ನಿರ್ದೇಶಕರ ಸಂಘ ಹೀಗೆ ಮಂಡಳಿಯ ಅಂಗ ಸಂಸ್ಥೆಗಳ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ನರಸಿಂಹಲು ಪ್ರಕಟಿಸಿದ್ದಾರೆ.

‘ಸೋನು ನಿಗಮ್‌ ವಿಡಿಯೊದಲ್ಲಿ ಕ್ಷಮೆ ಕೇಳಬಹುದು ಎಂದುಕೊಂಡಿದ್ದೆವು. ಆದರೆ ವಿಡಿಯೊದಲ್ಲಿ ಕ್ಷಮಾಪಣೆ ಕೇಳಲಿಲ್ಲ. ಹೀಗಾಗಿ ಕನ್ನಡ ಪರ ಸಂಘಟನೆಗಳು, ಸಂಗೀತ ನಿರ್ದೇಶಕರು, ನಿರ್ಮಾಪಕರು, ನಿರ್ದೇಶಕರ ಸಂಘ ಹೀಗೆ ಮಂಡಳಿಯ ಅಂಗ ಸಂಸ್ಥೆಗಳ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಕ್ಷಣದಿಂದಲೇ ಅಸಹಕಾರ ತೋರಬೇಕು ಎಂದು ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

ಪಹಲ್ಗಾಮ್‌ ಘಟನೆಯನ್ನು ಕನ್ನಡಕ್ಕೆ ತಳುಕು ಹಾಕಿ ವಿಶ್ಲೇಷಣೆ ಮಾಡಿರುವುದು ಸರಿಯಲ್ಲ. ಇದು ಖಂಡನೀಯ. ಕ್ಷಮಾಪಣೆ ಕೋರದೇ ಇದ್ದರೆ ಅವರ ಮೇಲೆ ಯಾವ ರೀತಿ ಕ್ರಮ ಆಗಬೇಕು ಎಂಬುವುದರ ಬಗ್ಗೆ ಮೂರ್ನಾಲ್ಕು ದಿನಗಳ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದೇವೆ. ಇದರಲ್ಲಿ ನಿರ್ಮಾಪಕರು, ಆಡಿಯೊ ಕಂಪನಿ ಮಾಲೀಕರನ್ನೂ ಕರೆಯಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.