ನಟ ಪೃಥ್ಚಿರಾಜ್ ಸುಕುಮಾರನ್
ಚಿತ್ರ: ಇನ್‌ಸ್ಟಾಗ್ರಾಮ್
ಎಸ್.ಎಸ್. ರಾಜಮೌಳಿ ನಿರ್ದೆಶನದ ಹಾಗೂ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯಲ್ಲಿ ಮೂಡಿಬರುತ್ತಿರುವ ಶೀರ್ಷಿಕೆ ಅಂತಿಮವಾಗದ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ನಟಿಸಲಿದ್ದಾರೆ ಎಂದು ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ.
ಸಿನಿಮಾಗೆ ತಾತ್ಕಾಲಿಕವಾಗಿ 'SSMB29' ಎಂದು ನಾಮಕರಣ ಮಾಡಲಾಗಿದ್ದು, ಈ ಸಿನಿಮಾದ ಬಗ್ಗೆ ಎಸ್.ಎಸ್ ರಾಜಮೌಳಿ ಒಂದೊಂದಾಗಿ ಅಪ್‌ಡೇಟ್ ನೀಡುತ್ತಿದ್ದಾರೆ. ಇದೀಗ ಎಸ್.ಎಸ್. ರಾಜಮೌಳಿ ಹಾಗೂ ಮಹೇಶ್ ಬಾಬು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಅದರಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಎಲೆಕ್ಟ್ರಿಕ್ ವೀಲ್ ಚೇರ್ ಮೇಲೆ ಕುಳಿತುಕೊಂಡಿದ್ದನ್ನು ಕಾಣಬಹುದು. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದರಲ್ಲಿ ನಟನ ಹೆಸರು ಕುಂಭ ಎಂದು ಇಡಲಾಗಿದೆ. ರಿಲೀಸ್ ಮಾಡಿರುವ ಪೋಸ್ಟರ್ನಲ್ಲಿ ನಟ ಪೃಥ್ವಿರಾಜ್ ವಿಕಲಚೇತನನಾಗಿ ಕಾಣಿಸಿಕೊಂಡಿದ್ದಾರೆ.
ಪೋಸ್ಟರ್ ಹಂಚಿಕೊಂಡ ಎಸ್.ಎಸ್.ರಾಜಮೌಳಿ, ‘ಪೃಥ್ವಿ ಜೊತೆ ಮೊದಲ ಶಾಟ್ ಮಾಡಿದ ನಂತರ, ನಾನು ಅವರ ಬಳಿಗೆ ಹೋಗಿ ನೀನು ನನಗೆ ತಿಳಿದಿರುವ ಅತ್ಯುತ್ತಮ ನಟರಲ್ಲಿ ಒಬ್ಬರು ಎಂದು ಹೇಳಿದೆ. ಈ ಸಿನಿಮಾದಲ್ಲಿ ದುಷ್ಟ, ನಿರ್ದಯ, ಶಕ್ತಿಶಾಲಿ ಪ್ರತಿಸ್ಪರ್ಧಿ ಪಾತ್ರ ಕುಂಭಾಗೆ ಜೀವ ತುಂಬುವುದು ಸೃಜನಾತ್ಮಕವಾಗಿ ತುಂಬಾ ತೃಪ್ತಿಕರವಾಗಿತ್ತು. ತನ್ನ ಕುರ್ಚಿಯಲ್ಲಿ ಕುಳಿತ ಪೃಥ್ವಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಇದೇ ತಿಂಗಳು ನವೆಂಬರ್ 15ರಂದು ರಾಮೋಜಿ ಫಿಲಂ ಸಿಟಿಯಲ್ಲಿ ಅತಿದೊಡ್ಡ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಅವರ ಫಸ್ಟ್ ಲುಕ್ ಹಾಗೂ ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ. ಸಿನಿಮಾದ ಮುಂದಿನ ಅಪ್‌ಡೇಟ್ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ಎಂದು ಎಸ್.ಎಸ್.ರಾಜಮೌಳಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.