
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳಿರುವ, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ‘45’ ಸಿನಿಮಾ ಡಿ.25ಕ್ಕೆ ತೆರೆಕಾಣುತ್ತಿದೆ. ರಿಲೀಸ್‌ಗೆ ಸಿದ್ಧತೆ ಆರಂಭಿಸಿರುವ ಚಿತ್ರತಂಡ ‘ಆ್ಯಫ್ರೊ ಟಪಾಂಗ್’ ಎನ್ನುವ ಪ್ರಮೋಷನಲ್ ಹಾಡೊಂದನ್ನು ಇತ್ತೀಚೆಗೆ ರಿಲೀಸ್ ಮಾಡಿದೆ. ವಿಶೇಷವೇನೆಂದರೆ ಯುಗಾಂಡದ ಘೆಟೊ ಕಿಡ್ಸ್ ಜೊತೆ ಮೂವರೂ ಸ್ಟಾರ್ಸ್ ಕುಣಿದು ಕುಪ್ಪಳಿಸಿದ್ದಾರೆ.
ರ್‍ಯಾಪ್ ಹಾಡಿನ ಮೂಲಕ ಜೀವನದ ಪಾಠ ಮಾಡಿದ್ದಾರೆ ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ. ಎಂ.ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, ‘ನಾನು ಕನಸಿನಲ್ಲೂ ನಿರ್ದೇಶಕನಾಗಬೇಕು ಎಂದುಕೊಂಡವನೇ ಅಲ್ಲ. ನನ್ನನ್ನು ನಿರ್ದೇಶಕರನ್ನಾಗಿ ಮಾಡಿದವರು ಶಿವರಾಜ್‌ಕುಮಾರ್. ಅವರು ಈ ಸಿನಿಮಾವನ್ನು ನೀವೇ ನಿರ್ದೇಶಿಸಿ ಎಂದಾಗ ಹೊಸ ಜವಾಬ್ದಾರಿ ಹೆಗಲೇರಿತು. ಇಡೀ ಸಿನಿಮಾದ ಕಥೆಯಲ್ಲಿ ಹಾಡು ಕೂರಿಸುವಂಥ ಜಾಗವೇ ಇಲ್ಲ. ಇದೊಂದು ಭಿನ್ನವಾದ ಕಥೆಯಾಗಿರುವ ಕಾರಣ ಕಮರ್ಷಿಯಲ್ ಹಾಡುಗಳಿಗೆ ಅವಕಾಶವೇ ಇರಲಿಲ್ಲ. ಹಾಡಿಲ್ಲದೆ ಮೂರು ಸ್ಟಾರ್‌ಗಳ ಅಭಿಮಾನಿಗಳನ್ನು ತಣಿಸುವುದು ಹೇಗೆ? ಹೀಗಾಗಿ ಒಂದು ಪ್ರೊಮೋಷನಲ್ ಹಾಡೊಂದನ್ನು ಮಾಡಿದೆವು. ಹಾಡು ಸಾಮಾನ್ಯವಾಗಿರಬಾರದು ಎನ್ನುವ ಯೋಚನೆ ಮಾಡಿ ಘೆಟೋ ಕಿಡ್ಸ್ ತಂಡವನ್ನು ಕರೆತಂದೆ. ಮೊದಲು ಯುಗಾಂಡಕ್ಕೇ ಹೋಗಿ ಈ ಹಾಡಿನ ಚಿತ್ರೀಕರಣ ಮಾಡಲು ಉದ್ದೇಶಿಸಿದ್ದೆವು. ಆದರೆ ತಾಂತ್ರಿಕವಾಗಿ ಕೊಂಚ ಕಷ್ಟವಿದ್ದ ಕಾರಣ ಅವರನ್ನೇ ಇಲ್ಲಿಗೆ ಕರೆದೆವು. ಸುಮಾರು 15 ಮಕ್ಕಳಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದರು. ಹಾಡು ಕಂಪೋಸ್ ಮಾಡುವಾಗಲೇ ‘ಜೋಗಿ’ ಸ್ಟೆಪ್, ‘ಉಪೇಂದ್ರ’ ಸ್ಟೆಪ್ ಹಾಗೂ ಹುಲಿವೇಷ ಸ್ಟೆಪ್ ಬರಬೇಕು ಎಂದು ನಿರ್ಧರಿಸಿದ್ದೆ’ ಎಂದರು.
ಹಾಡಿನಲ್ಲಿದೆ ಕಥೆ!
‘ಇದು ಕೇವಲ ಪ್ರಮೋಷನಲ್ ಹಾಡಲ್ಲ. ಹಾಡಿನೊಳಗೆ ಒಂದು ಕಥೆಯಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಸಂದರ್ಭದಲ್ಲಿ ನನಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ವಿಷಯ ತಿಳಿದು ಅರ್ಜುನ್ ಜನ್ಯ ಮಗುವಿನಂತೆ ಅತ್ತಿದ್ದರು. ಆ ಸಂದರ್ಭದಲ್ಲಿ ಇಡೀ ತಂಡವು ನನ್ನನ್ನು ಮಗುವಿನಂತೆ ನೋಡಿಕೊಂಡಿತ್ತು. ಇದರಿಂದ ನನಗೂ ಧೈರ್ಯ ಬಂದಿತ್ತು. ಆನಂದ್ ಆಡಿಯೊದವರು ಈ ಸಿನಿಮಾದ ಹಕ್ಕುಗಳನ್ನು ಪಡೆದಿದ್ದಾರೆ. ಒಂದೊಳ್ಳೆಯ ಸಿನಿಮಾ ಆಗಲಿದೆ ಎನ್ನುವ ಭರವಸೆ ಇದೆ. ದೇವರ ಬಗ್ಗೆಯೇ ಇರುವ ಸಿನಿಮಾವಿದು’ ಎಂದರು ಶಿವರಾಜ್‌ಕುಮಾರ್
ಚಿತ್ರಕ್ಕೆ ಕೆನಡಾದಲ್ಲಿ ನೆಲೆಸಿರುವ ಯಶ್ ಶೆಟ್ಟಿ ನೇತೃತ್ವದಲ್ಲಿ ವಿಎಫ್‌ಎಕ್ಸ್ ಮಾಡಲಾಗಿದೆ.
ನನಗೆ ಕಲಿಯೋಕೆ ಹೆಚ್ಚು ಅವಕಾಶ ಸಿಕ್ಕಿದ ಸಿನಿಮಾವಿದು. ಇದು ಕೇವಲ ಕನ್ನಡಕ್ಕೊಂದು ಒಳ್ಳೆಯ ಸಿನಿಮಾವಾದರೆ ಸಾಲದು. ಭಾರತಕ್ಕೆ ಒಂದೊಳ್ಳೆ ಸಿನಿಮಾವಾಗಬೇಕು. ಆ ಕ್ಷಮತೆ ಈ ಸಿನಿಮಾಗಿದೆ. ನಾನು ಉಪೇಂದ್ರ ಅವರ ನಿರ್ದೇಶನದ ದೊಡ್ಡ ಅಭಿಮಾನಿ. ಅವರ ಪೋಸ್ಟರ್ ನೋಡಿ ಸಿನಿಮಾಗೆ ಬಂದವನು.ರಾಜ್ ಬಿ.ಶೆಟ್ಟಿ ನಟ
ನಮ್ಮ ಸಿನಿಮಾದ ಶೂಟಿಂಗ್ ಪೂರ್ಣ ಮಾಡಿಕೊಂಡೇ ಶಸ್ತ್ರಚಿಕಿತ್ಸೆಗಾಗಿ ಶಿವಣ್ಣ ಅಮೆರಿಕ ಹೋದರು. ಆಸ್ಪತ್ರೆಯಿಂದ ಬಿಡುಗಡೆಯಾದ ಹದಿನೈದು ದಿನಕ್ಕೆ ಹಾಡಿನ ಸೆಟ್‌ಗೆ ಬಂದಿದ್ದರು.ಎಂ.ರಮೇಶ್ ರೆಡ್ಡಿ ನಿರ್ಮಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.