ಇಂದು(ಆ.15) ಸ್ವಾತಂತ್ರ್ಯದ ಅಮೃತ ಮಹೋತ್ಸವ. ಇಡೀ ದೇಶವೇ ಈ ಸಂಭ್ರಮಾಚರಣೆಯಲ್ಲಿ ಮುಳುಗಿದ್ದು, ಮನೆಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರಿಗೆ ಗೌರವ ಸಲ್ಲಿಸಿದ್ದಾರೆ. ಚಂದನವನದ ಕಲಾವಿದರೂ ಈ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತ್ರಿರ್ವಣ ಧ್ವಜವನ್ನು ಹಿಡಿದು ಶುಭಕೋರಿ ಹಲವು ನಟ, ನಟಿಯರು ಪೋಸ್ಟ್ ಮಾಡಿದ್ದಾರೆ. ‘ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬ ಭಾರತೀಯನಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು. ಈ ಮಾತೃಭೂಮಿ ನಮ್ಮ ಮನೆ. ನಾವು ಒಂದಾಗೋಣ ಮತ್ತು ಅದನ್ನು ಇನ್ನಷ್ಟು ಸುಂದರಗೊಳಿಸೋಣ. ವಂದೇ ಮಾತರಂ’ಎಂದುನಟಸುದೀಪ್‌ಟ್ವೀಟ್‌ಮಾಡಿದ್ದಾರೆ.
ಕುಟುಂಬ ಸಹಿತ ಧ್ವಜ ಹಿಡಿದುಕೊಂಡ ಫೋಟೊವೊಂದನ್ನು ಪೋಸ್ಟ್ ಮಾಡಿರುವ ನಟ ಯಶ್, ‘ಪಸರಿಸಲಿ ವಿಶ್ವಕ್ಕೆಲ್ಲಾ ಭಾರತದ ತ್ರಿವರ್ಣ ಧ್ವಜದ ಹಿರಿಮೆ. ಪ್ರತಿಯೊಬ್ಬ ಭಾರತೀಯ ಹೆಮ್ಮೆಯಿಂದ ಹೇಳುವ ‘ಜೈ ಹಿಂದ್’. ಎಲ್ಲರಿಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು’ ಎಂದಿದ್ದಾರೆ. ನಟ ಗಣೇಶ್, ಚಿತ್ರಮಂದಿರವೊಂದರ ಮೇಲೆ ನಿಂತು ಭಾರತದ ಧ್ವಜವನ್ನು ಹಿಡಿದು ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಕೋರಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ವಿಡಿಯೊವೊಂದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಧ್ವನಿ ನೀಡಿರುವ ಈ ‘ವಂದೇ ಮಾತರಂ’ ಹಾಡಿನಲ್ಲಿ ನಟರಾದ ಅನಂತನಾಗ್, ಜಗ್ಗೇಶ್, ರವಿಚಂದ್ರನ್, ಶಿವರಾಜ್‌ಕುಮಾರ್, ಸುದೀಪ್, ಅರ್ಜುನ್ ಸರ್ಜಾ, ಗಣೇಶ್, ರಮೇಶ್ ಅರವಿಂದ್, ಧ್ರುವ ಸರ್ಜಾ, ಶ್ರೀಮುರಳಿ, ರಿಷಬ್ ಶೆಟ್ಟಿ, ಧನಂಜಯ್ ಮುಂತಾದವರು ಒಂದಾಗಿದ್ದಾರೆ. ನಟರ ಜೊತೆಗೆ ಸಾಹಿತಿ ಎಸ್.ಎಲ್. ಭೈರಪ್ಪ, ಜಾನಪದ ಕಲಾವಿದೆ ಮಂಜಮ್ಮ ಜೋಗತಿ, ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್, ಸಾಲುಮರದ ತಿಮ್ಮಕ್ಕ ಕೂಡಾ ವಿಡಿಯೊದಲ್ಲಿ ಇದ್ದಾರೆ.
ಈ ವಿಡಿಯೊ ಟ್ವೀಟ್‌ಗೆ ಶೀರ್ಷಿಕೆಯಾಗಿ ‘ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ’ ಎಂದು ಸಿ.ಎಂ. ಟ್ವೀಟ್‌ನಲ್ಲಿ ಉಲ್ಲೇಖಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ‘ಕೇವಲ ನಟರಷ್ಟೇ ಇದ್ದಾರೆ. ನಟಿಯರು ಸಾಧನೆ ಮಾಡಿಲ್ಲವೇ?’ ‘ಯಶ್, ದರ್ಶನ್, ಅನಿಲ್ ಕುಂಬ್ಳೆ, ದ್ರಾವಿಡ್ ಏಕಿಲ್ಲ?’, ‘ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಳ್ಳಬೇಕಿತ್ತು’ ಹೀಗೆ ಜನರು ಈ ವಿಡಿಯೊಗೆ ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.