ನಟ ಉಪೇಂದ್ರ, ನಟಿ ನಯನತಾರಾ
ಚಿತ್ರ: ಎಕ್ಸ್ ಖಾತೆ
ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿರುವ 'ಸೂಪರ್' ಸಿನಿಮಾ ಬಿಡುಗಡೆಯಾಗಿ ನಿನ್ನೆಗೆ (ಬುಧವಾರ) 15 ವರ್ಷಗಳನ್ನು ಪೂರೈಸಿದೆ. 2010ರ ಡಿಸೆಂಬರ್ 3ರಂದು ಬಿಡುಗಡೆಯಾದ ಸೂಪರ್ ಸಿನಿಮಾ ಕನ್ನಡದ ರಾಜಕೀಯ ಒಳಗೊಂಡಿರುವ ಕಥಾ ಹಂದರವಾಗಿದೆ.
ಈ ಕುರಿತು ನಟ ಉಪೇಂದ್ರ ಅವರು ಸಾಮಾಜಿಕ ಮಾಧ್ಯಮದಲ್ಲಿ 'ಸೂಪರ್' ಸಿನಿಮಾಗೆ 15 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಟ ಉಪೇಂದ್ರ ಹಾಗೂ ನಟಿ ನಯನತಾರಾ ಇರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
ಸೂಪರ್ ಸಿನಿಮಾ ಹೆಸರಿಗೆ ತಕ್ಕಂತೆ ಸೂಪರ್ ಹಿಟ್ ಆಗಿತ್ತು. ಸೂಪರ್ ಸಿನಿಮಾದಲ್ಲಿ ರಾಜಕೀಯ ನಮ್ಮ ದೇಶವನ್ನು ಹೇಗೆಲ್ಲಾ ಹಾಳು ಮಾಡಿತ್ತಿದೆ ಎಂದು ತೋರಿಸಲಾಗಿತ್ತು. ರಾಜಕಾರಣಿಗಳು ಹೇಗೆಲ್ಲಾ ದೇಶವನ್ನು ಲೂಟಿ ಮಾಡುತ್ತಿದ್ದಾರೆ? ದೇಶದ ಸತ್ಪ್ರಜೆಗಳು ಮನಸ್ಸು ಮಾಡಿದರೆ ಹೇಗೆಲ್ಲಾ ಭವಿಷ್ಯದಲ್ಲಿ ಮುನ್ನಡೆಸುತ್ತಾರೆ ಎಂದು ಗ್ರಾಫಿಕ್ಸ್ ಮೂಲಕ ಅದ್ಭುತವಾಗಿ ತೋರಿಸಿದ್ದರು.
ಸಿಎಂ ಎಂದರೆ ಚೀಫ್ ಮಿನಿಸ್ಟರ್ ಅಲ್ಲ ಕಾಮನ್ ಮ್ಯಾನ್ ಎಂದು ತಮ್ಮ ನಿರ್ದೇಶನ ಹಾಗೂ ಡೈಲಾಗ್ಗಳ ಮೂಲಕ ತೋರಿಸಿದ್ದರು. ಈ ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದರು, ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದರು. ನಟ ಉಪೇಂದ್ರ ಅವರಿಗೆ ಸ್ಟಾರ್ ನಟಿ ನಯನತಾರ ಜೋಡಿಯಾಗಿದ್ದರು.
ಈ ಸಿನಿಮಾ ಬಿಡುಗಡೆಗೂ ಮೊದಲೇ ಆಡಿಯೊ ಹಕ್ಕುಗಳ ಮೂಲಕ ₹10 ಕೋಟಿ ಗಳಿಸಿತ್ತು. ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ₹50 ಕೋಟಿ ಗಳಿಸಿತ್ತು. ಜಾಕಿ ಸಿನಿಮಾದ ಜೊತೆಗೆ 2010ರ ಅತ್ಯಂತ ಹೆಚ್ಚು ಹಣಗಳಿಸಿದ ಚಲನಚಿತ್ರಗಳಲ್ಲಿ ಒಂದಾಗಿತ್ತು. ಆಮೇಲೆ ಈ ಚಿತ್ರವನ್ನು ಹಿಂದಿಯಲ್ಲಿ ರೌಡಿ ಲೀಡರ್–2 ಎಂದು ಡಬ್ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.