
ಸೂರ್ಯ ಪ್ರಖ್ಯಾತ್
‘ನಡುವೆ ಅಂತರವಿರಲಿ’ ಸಿನಿಮಾ ಮೂಲಕ ನಾಯಕನಾಗಿ ಬಂದ ಸೂರ್ಯ ಪ್ರಖ್ಯಾತ್ ಏಳು ವರ್ಷಗಳ ಬಳಿಕ ‘ಜೆಸಿ–ದಿ ಯೂನಿವರ್ಸಿಟಿ’ಯಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲಿನಲ್ಲಿ ನಡೆಯುವ ಅವ್ಯವಹಾರಗಳು, ಅದರ ಪರಿಣಾಮದ ಕಥೆ ಹೊತ್ತ ಈ ಸಿನಿಮಾಗಾಗಿ ತಯಾರಾದ ಬಗೆಯನ್ನು ಸೂರ್ಯ ವಿವರಿಸಿದ್ದಾರೆ...
ಏಳು ವರ್ಷಗಳ ನಂತರ ಮತ್ತೊಂದು ಸಿನಿಮಾ ತೆರೆಕಾಣುತ್ತಿದೆ. ಕಾರಣವೇನು?
ಮೊದಲ ಸಿನಿಮಾ ‘ನಡುವೆ ಅಂತರವಿರಲಿ’ ಬೆನ್ನಲ್ಲೇ ಮೂರು ಸಿನಿಮಾಗಳನ್ನು ಮಾಡಿದೆ. ಹಲವು ಕಾರಣಗಳಿಂದಾಗಿ ಅವು ತೆರೆ ಕಾಣಲೇ ಇಲ್ಲ. ಈ ಪೈಕಿ ಎರಡು ಚಿತ್ರಗಳ ಶೂಟಿಂಗ್ ಪೂರ್ಣಗೊಂಡಿತ್ತು, ಮತ್ತೊಂದು ಸಿನಿಮಾ ಅರ್ಧ ಆಗಿತ್ತು. ಜೊತೆಗೆ ಕೋವಿಡ್ ಕಾರಣದಿಂದ ಏಳು ವರ್ಷ ವ್ಯರ್ಥವಾಯಿತು. ಮೊದಲ ಸಿನಿಮಾದಲ್ಲೇ ಹೆಜ್ಜೆ ಗುರುತು ಮೂಡಿಸಿದ್ದೆ. ಅದೇ ಭರವಸೆಯಲ್ಲಿ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಕಾರಣಾಂತರಗಳಿಂದ ಅವುಗಳು ಕೈಹಿಡಿಯಲಿಲ್ಲ. ಇದು ನನ್ನ ಸಿನಿಪಯಣಕ್ಕೆ ದೊಡ್ಡ ಹೊಡೆತ ನೀಡಿತು. ಮತ್ತೆ ತೆರೆ ಮೇಲೆ ಬರಲೇಬೇಕು ಎನ್ನುವ ಹಟದೊಂದಿಗೆ ಮುಂದಿನ ಹೆಜ್ಜೆ ಇಟ್ಟೆ. ಪ್ರೀಪ್ರೊಡಕ್ಷನ್ ಪೂರ್ಣಗೊಳಿಸಿ ಧನಂಜಯ ಅವರನ್ನು ಸಂಪರ್ಕಿಸಿದ್ದೆವು.
ಧನಂಜಯ ಬಳಿ ಕಥೆ ಹೋದ ಸಮಯ...
ಚೇತನ್ ಜೈರಾಮ್ ನನಗೆ ‘ಜೆಸಿ’ ಕಥೆ ಹೇಳಿದಾಗ ಬಹಳ ಕನೆಕ್ಟ್ ಆಯಿತು. ಅದರೊಳಗಿನ ಅಂಶಗಳು ಇಷ್ಟವಾದವು. ಅಲ್ಲಿಂದ ನಿರ್ಮಾಪಕರ ಹುಡುಕಾಟ ನಡೆಯಿತು. ಈ ಪಾತ್ರವನ್ನು ನಿಭಾಯಿಸುವವರು ಯಾರಾದರೂ ಬೇಕಲ್ಲವೇ ಎಂದು ಯೋಚಿಸಿದರು. ನಾವು ಕಥೆ ಹೇಳಿದಾಗ ‘ಚಿತ್ರರಂಗಕ್ಕೆ ಓರ್ವ ಎಳೆ ರೌಡಿ ಬೇಕು ಕಣೋ’ ಎಂದಿದ್ದರು. ‘ಸದ್ಯ ಚಿತ್ರರಂಗದಲ್ಲಿ ಯಾರೂ ಇಂಥವರಿಲ್ಲ. ನಾವೆಲ್ಲಾ ಹಿಟ್ ಆಗಿರೋದು ಅಂಥ ಪಾತ್ರ ಮಾಡಿಯೇ’ ಎಂದು ನೆನಪಿಸಿಕೊಂಡರು. ಈ ರೀತಿ ವಿಷಯಗಳು ತೆರೆ ಮೇಲೆ ಹಿಟ್ ಆಗಿರುವ ಇತಿಹಾಸ ಚಿತ್ರರಂಗಕ್ಕಿದೆ. ಡಾಲಿ ಪಿಕ್ಚರ್ಸ್‌ನಡಿ ಬರುತ್ತಿರುವ ಡಾಲಿ ಫ್ಲೇವರ್ ಸಿನಿಮಾ ಈ ಜೆಸಿ.
ನೀವೇ ನಾಯಕನಾಗಿದ್ದು ಹೇಗೆ?
ಮೊದಲು ನನ್ನನ್ನು ಎಲ್ಲರೂ ಚಾಕೊಲೇಟ್ ಬಾಯ್, ಅಮೂಲ್ ಬಾಯ್ ರೀತಿ ನೋಡುತ್ತಿದ್ದರು. ನನ್ನ ಮೊದಲ ಸಿನಿಮಾವೂ ಆ ಜಾನರ್‌ನಲ್ಲಿ ಇದ್ದಿದ್ದು ಇದಕ್ಕೆ ಕಾರಣ. ‘ಜೆಸಿ’ಯಲ್ಲಿನ ‘ಮ್ಯಾಡಿ’ ಪಾತ್ರ ನನಗೆ ಹಿಡಿಸುತ್ತದೆಯೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡವು. ಈ ಪಾತ್ರಕ್ಕಾಗಿ ನಾನು ದೈಹಿಕವಾಗಿ ಬದಲಾದೆ. ಸಿಕ್ಸ್ ಪ್ಯಾಕ್ ಮಾಡಿಕೊಂಡು ಮಾಸ್ ಅವತಾರಕ್ಕೆ ತಯಾರಾಗಿ ಫೋಟೋಶೂಟ್ ಮಾಡಿಸಿದೆ. ಇದನ್ನು ನೋಡಿ ಧನಂಜಯ ಅವರೂ ಒಪ್ಪಿದರು. ‘ಜೆಸಿ’ಯಲ್ಲಿ ಹಲವು ಶೇಡ್‌ಗಳು ನನ್ನ ಪಾತ್ರಕ್ಕಿದೆ. ಕಾಲೇಜು ಹುಡುಗನಾಗಿಯೂ ಕಾಣಿಸಿಕೊಂಡಿದ್ದೇನೆ. 32–33 ವರ್ಷದ ಯುವಕನ ಪಾತ್ರವೂ ಇದೆ.
ಏನಿದು ಯೂನಿವರ್ಸಟಿ ಕಥೆ?
‘ಮ್ಯಾಡಿ’ ಓರ್ವ ಮುಗ್ಧ ಹುಡುಗ. ಜೊತೆಗೆ ಸ್ನೇಹಕ್ಕೆ ಬೆಲೆ ಕೊಡುವ ವ್ಯಕ್ತಿತ್ವ. ಇಂಥವನಿಗೆ ನ್ಯಾಯ ಸಿಗದೇ ಇದ್ದಾಗ ನ್ಯಾಯಕ್ಕಾಗಿ ಹೋರಾಡುವ ಕಥೆ ಇದು. ಇಡೀ ಸಿನಿಮಾ ಕಥೆ ಜೈಲಿನೊಳಗೆ ನಡೆಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿರುವ ಜೈಲಿನ ವ್ಯವಸ್ಥೆ ಬಗ್ಗೆ ಕಥೆಯಲ್ಲಿದೆ. ಈ ವ್ಯವಸ್ಥೆ ಎಷ್ಟು ಹದಗೆಟ್ಟಿದೆ, ಅಲ್ಲಿನ ರಾಜಕೀಯ, ಒಳ ಸೇರುವ ಅಪರಾಧಿಗಳು ಪರಿವರ್ತನೆ ಆಗದೆ ಹೇಗೆ ಮತ್ತಷ್ಟು ಹದಗೆಡುತ್ತಿದ್ದಾರೆ ಎನ್ನುವುದನ್ನು ತೋರಿಸಿದ್ದೇವೆ. ಇದೊಂದು ರೀತಿ ಯೂನಿವರ್ಸಿಟಿ ಆಗಿದೆ. ಅಲ್ಲಿಗೆ ಹೋದ ಮೇಲೆ ‘ಪದವಿ’ ಸಿಕ್ಕು ಹೊರಬರುವಂತಾಗಿದೆ. ಇಂಥವರು ಹೊರಬಂದ ಮೇಲೆ ದೊಡ್ಡಮಟ್ಟದ ಅಕ್ರಮಗಳನ್ನು ಮಾಡಿದರೆ ಆಗುವ ಪರಿಣಾಮಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ. ಯುವ ಜನತೆ ಈ ಸಿನಿಮಾ ನೋಡಿ ಒಂದೊಳ್ಳೆಯ ಸಂದೇಶವನ್ನು ಅರ್ಥಮಾಡಿಕೊಳ್ಳಬಹುದು.
ಸಿನಿಮಾ ಮುಖಾಂತರ ತಂದೆ–ಮಗನ ಬಾಂಧವ್ಯದ ಕಥೆಯನ್ನೂ ಹೇಳಲಾಗಿದೆ. ಮಗನನ್ನು ದಾರಿಗೆ ತರಲು ತಂದೆಯ ಹೋರಾಟ ಹೇಗಿರುತ್ತದೆ ಎನ್ನುವುದೂ ಕಥೆಯಲ್ಲಿದೆ. ರಂಗಾಯಣ ರಘು ಅವರು ತಂದೆ ಪಾತ್ರಕ್ಕೆ ಜೀವ ತುಂಬಿ ಸಿನಿಮಾ ನಾಯಕರಾಗಿದ್ದಾರೆ.
ಹೆಸರು ಬದಲಾವಣೆಗೆ ಕಾರಣ...
ದೊಡ್ಡ ಕಾರಣವೇನಿಲ್ಲ. ಪ್ರಖ್ಯಾತ್ ಪರಮೇಶ್ ಎಂದಿತ್ತು. ಮನೆಯಲ್ಲಿ ಅಪ್ಪ ‘ಸೂರ್ಯ’ ಎಂದು ಕರೆಯುತ್ತಿದ್ದರು. ಈ ಹೆಸರೇ ಎಲ್ಲರಿಗೂ ಹೇಳುವುದಕ್ಕೆ ಸುಲಭ ಎಂದು ಪ್ರಖ್ಯಾತ್ ಮೊದಲು ಸೇರಿಸಿಕೊಂಡೆ.
ಧನಂಜಯ ಅವರ ಬೆಂಬಲ ಹೇಗಿತ್ತು?
ಚಿತ್ರರಂಗಕ್ಕೆ ಅವರ ಕೊಡುಗೆ ಕಂಡು ಖುಷಿಯಾಗುತ್ತದೆ. ನಟನಾಗಿ ಉಳಿಯದೆ ನಿರ್ಮಾಪಕನಾಗಿ ಹೊಸಬರಿಗೆ ಅವಕಾಶ ನೀಡುತ್ತಾ ಬಂದಿದ್ದಾರೆ. ಇದಕ್ಕೆ ಧೈರ್ಯ ಬೇಕು. ಇದರಿಂದ ಕಲಾವಿದರು, ತಂತ್ರಜ್ಞರನ್ನು ಗುರುತಿಸುವ ಕೆಲಸವಾಗುತ್ತಿದೆ.
ನಿಮ್ಮ ಮುಂದಿನ ಆಯ್ಕೆಗಳು...
ನಾಯಕನ ಪಾತ್ರಕ್ಕಿಂತ ಕಥೆಗೆ ಪ್ರಾಮುಖ್ಯತೆ ಇರಲಿದೆ. ಎಲ್ಲಾ ಮಾದರಿಯ ಪಾತ್ರಗಳನ್ನು ಮಾಡುವ ಆಸೆ ನನಗಿದೆ. ಮಧ್ಯಮ ವರ್ಗದ ಹುಡುನಗಾಗಿ ಕಾಣಿಸಿಕೊಳ್ಳುವ ಪೌರಾಣಿಕ ಕಥೆಗಳನ್ನು ಮಾಡುವ ಆಸೆ ಇದೆ. ‘ನಡುವೆ ಅಂತರವಿರಲಿ’ ಬಳಿಕ ನಟಿಸಿದ ಸಿನಿಮಾದಲ್ಲಿ ‘ಕ್ಯಾಬ್ ಡ್ರೈವರ್’ ಪಾತ್ರ ಮಾಡಿದ್ದೆ. ಹೀಗೆ ಸಿನಿಮಾದಿಂದ ಸಿನಿಮಾಗೆ ಹೊಸ ಪಾತ್ರಗಳನ್ನು ಅರಸುವಾತ. ಈ ನಿಟ್ಟಿನಲ್ಲಿ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದೇನೆ. ಇದರಲ್ಲಿ ಮಧ್ಯಮ ವರ್ಗದ ಹುಡುಗನಾಗಿ ನಟಿಸಲಿದ್ದೇನೆ.