ADVERTISEMENT

ಸುಶ್ಮಿತಾ ಸೇನ್‌ಗೆ ಹೃದಯಾಘಾತ, ಸ್ಟೆಂಟ್ ಅಳವಡಿಕೆ: ಮಾಹಿತಿ ಬಿಚ್ಚಿಟ್ಟ ನಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2023, 8:52 IST
Last Updated 3 ಮಾರ್ಚ್ 2023, 8:52 IST
ಮಾಜಿ ಭುವನ ಸುಂದರಿ ಮತ್ತು ನಟಿ ಸುಶ್ಮಿತಾ ಸೇನ್
ಮಾಜಿ ಭುವನ ಸುಂದರಿ ಮತ್ತು ನಟಿ ಸುಶ್ಮಿತಾ ಸೇನ್   

ಮುಂಬೈ: ಕೆಲ ದಿನಗಳ ಹಿಂದೆ ತಮಗೆ ಹೃದಯಾಘಾತ ಸಂಭವಿಸಿತ್ತು ಎಂದು ಮಾಜಿ ಭುವನ ಸುಂದರಿ ಮತ್ತು ನಟಿ ಸುಶ್ಮಿತಾ ಸೇನ್ (47) ಹೇಳಿಕೊಂಡಿದ್ದಾರೆ.

ಬಳಿಕ ಆಸ್ಪತ್ರೆಗೆ ದಾಖಲಾಗಿ, ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದು, ಹೃದಯಕ್ಕೆ ಸ್ಟೆಂಟ್ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. ‘ಪುನಃ ಜೀವನಕ್ಕೆ ಸಿದ್ದನಾಗಿದ್ದೇನೆ‘ ಎಂದು ತಮ್ಮ ಆರೋಗ್ಯ ಚೇತರಿಕೆ ಬಗ್ಗೆ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸೇನ್ ಗುರುವಾರ ಹಂಚಿಕೊಂಡಿದ್ದಾರೆ.

‘ನಿಮ್ಮ ಹೃದಯವನ್ನು ಸಂತೋಷ ಮತ್ತು ಧೈರ್ಯದಿಂದ ಇಟ್ಟುಕೊಳ್ಳಿ, ಅದು ನಿಮಗೆ ಹೆಚ್ಚು ಅಗತ್ಯವಿರುವಾಗ ನಿಮ್ಮೊಂದಿಗೆ ನಿಲ್ಲುತ್ತದೆ’ಎಂಬ ಅವರ ತಂದೆಯ ಮಾತುಗಳನ್ನು ನಟಿ ನೆನಪಿಸಿಕೊಂಡಿದ್ದಾರೆ.

ADVERTISEMENT

‘ನನಗೆ ಒಂದೆರಡು ದಿನಗಳ ಹಿಂದೆ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆಗೆ ದಾಖಲಾಗಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಹಾಗೆಯೆ ಹೃದಯಕ್ಕೆ ಸ್ಟೆಂಟ್‌ ಅಳವಡಿಸಲಾಗಿದೆ. ನಾನು ದೊಡ್ಡ ಹೃದಯ ಹೊಂದಿದ್ದೇನೆ ಎಂದು ವೈದ್ಯರು ಮತ್ತೊಮ್ಮೆ ಖಚಿತಪಡಿಸಿದರು ಎಂದು ನಟಿ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಫೆಬ್ರುವರಿ 27ರಂದು ಸುಶ್ಮಿತಾ ಸೇನ್ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಸಣ್ಣ ಶಸ್ತ್ರಚಿಕಿತ್ಸಗೆ ಒಳಗಾಗಿದ್ದರು. ಹೃದ್ರೋಗ ತಜ್ಞರು ಆರೋಗ್ಯ ಚೇತರಿಕೆಯ ಬಗ್ಗೆ ದೃಢೀಕರಿಸಿದ ನಂತರ ಮಾರ್ಚ್ 1 ರಂದು ನಟಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

‘ಈ ಪೋಸ್ಟ್ ನನ್ನ ಹಿತೈಷಿಗಳು ಮತ್ತು ಪ್ರೀತಿಪಾತ್ರರಿಗೆ ಒಳ್ಳೆಯ ಸುದ್ದಿಯನ್ನು ತಿಳಿಸಲು ಮಾತ್ರ ಮಾಡಿದ್ದೇನೆ. ಎಲ್ಲವೂ ಚೆನ್ನಾಗಿದೆ ಮತ್ತು ದೇವರ ದಯೆಯಿಂದ ನಾನು ಮತ್ತೆ ಜೀವನಕ್ಕೆ ಸಿದ್ಧಳಾಗಿದ್ದೇನೆ! ನಿಮ್ಮನ್ನು ನಾನು ತುಂಬಾ ಪ್ರೀತಿಸುತ್ತೇನೆ’ ಎಂದು ಹೇಳಿದ್ದಾರೆ.

ಸುಶ್ಮಿತಾ ಅವರ ಈ ಪೋಸ್ಟ್‌ಗೆ ಟಬು, ಪೂನಂ ಧಿಲ್ಲೋನ್ ಮತ್ತು ಸೋಫಿ ಚೌದ್ರಿ ಸೇರಿದಂತೆ ಚಿತ್ರರಂಗದ ಹಲವರು ಪ್ರತಿಕ್ರಿಯಿಸಿದ್ದು, ಶುಭಾಶಯಗಳನ್ನು ಹೇಳಿದ್ದಾರೆ.

‘ಲಾಟ್ಸ್ ಆಫ್ ಲವ್ ಸೂಪರ್ ಗರ್ಲ್‘ ಎಂದು ಸೇನ್ ಅವರ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ನಟಿ ಟಬು ಬರೆದಿದ್ದಾರೆ. ‘ಒಳ್ಳೆಯದಾಗಿರಿ - ನೀವು ಅದ್ಭುತ ಮಹಿಳೆ! ದೇವರು ನಿಮಗೆ ಯಾವಾಗಲೂ ಉತ್ತಮ ಆರೋಗ್ಯವನ್ನು ನೀಡಲಿ’ ಎಂದು ಧಿಲ್ಲೋನ್ ಬರೆದಿದ್ದಾರೆ.

‘ನಿಮಗೆ ಪ್ರೀತಿ ಮತ್ತು ಬೆಳಕನ್ನು ಕಳುಹಿಸುತ್ತಿದ್ದೇನೆ ನೀವು ಮತ್ತು ನಿಮ್ಮ ಹೃದಯವು ಎಂದಿಗಿಂತಲೂ ಬಲವಾಗಿರುತ್ತದೆ ಎಂದು ನನಗೆ ತಿಳಿದಿದೆ‘ ಎಂದು ಸೋಫಿಯಾ ಚೌಧರಿ ಶುಭ ಹಾರೈಸಿದ್ದಾರೆ.

ಸುಶ್ಮಿತಾ ಸೇನ್ ಇತ್ತೀಚೆಗೆ 'ಆರ್ಯ' ಮೂರನೇ ಸೀಸನ್‌ನ ಚಿತ್ರೀಕರಣದಲ್ಲಿದ್ದರು. 2014ರಲ್ಲಿ ಸೇನ್‌ಗೆ ಅಡಿಸನ್ ಕಾಯಿಲೆ ಇರುವುದು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.