ADVERTISEMENT

ತಬಲಾ ನಾಣಿ ಕೈಯಲ್ಲಿ ಮಂಜುಳಾ ಮಿಸ್ಟರಿ!

ಕೆ.ಎಂ.ಸಂತೋಷ್‌ ಕುಮಾರ್‌
Published 25 ಜೂನ್ 2020, 9:49 IST
Last Updated 25 ಜೂನ್ 2020, 9:49 IST
ಮಿಸ್ಟರಿ ಆಫ್‌ ಮಂಜುಳಾ ಚಿತ್ರದಲ್ಲಿ ಲಕ್ಷ್ಮಿ ಸಿದ್ದಯ್ಯ ಮತ್ತು ತಬಲಾ ನಾಣಿ
ಮಿಸ್ಟರಿ ಆಫ್‌ ಮಂಜುಳಾ ಚಿತ್ರದಲ್ಲಿ ಲಕ್ಷ್ಮಿ ಸಿದ್ದಯ್ಯ ಮತ್ತು ತಬಲಾ ನಾಣಿ   

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದಲ್ಲಿ ತಬಲಾ ನಾಣಿಯವರ ಸಹಜ ಅಭಿನಯ ಪ್ರೇಕ್ಷಕರಿಗೆ ಖುಷಿ ನೀಡಿತ್ತು. ಈ ಚಿತ್ರ ಯಶಸ್ಸು ಕೂಡ ಕಂಡಿತ್ತು. ಈಗ ಅದೇ ಜಾಡಿನ ಮತ್ತೊಂದು ಹಾಸ್ಯ ಪ್ರಧಾನ ಚಿತ್ರದಲ್ಲಿ ನಾಣಿಯವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಯುವ ನಿರ್ದೇಶಕ ಪ್ರವೀಣ್‌ ಜಯಣ್ಣ. ಇದು ಪ್ರವೀಣ್‌ ಚೊಚ್ಚಲ ಸಿನಿಮಾ.

‘ಚಿತ್ರದಲ್ಲಿ ಹಾರಾರ್‌ ಮತ್ತು ಥ್ರಿಲ್ಲರ್‌ ಅಂಶಗಳು ಎದ್ದು ಕಾಣುವಂತೆ ಇದ್ದರೂ ಎಂತಹ ಸನ್ನಿವೇಶದಲ್ಲೂನಾಣಿಯವರ ಮೂಲ ಕಾಮಿಡಿ ಫ್ಲೇವರ್‌ ಚಿತ್ರವನ್ನು ಆವರಿಸಿಕೊಳ್ಳದೇ ಇರುವುದಿಲ್ಲ’ ಎಂದು ಚಿತ್ರದ ನಿರ್ದೇಶಕ ಪ್ರವೀಣ್‌ ಜಯಣ್ಣ ಸಿನಿಮಾ ಪುರವಣಿಯ ಜತೆಗೆ ಮಾತಿಗಿಳಿದರು.

‘ಮನೆಯಲ್ಲಿ ಒಂದು ಸಮಸ್ಯೆ ಬಂದಾಗ ಮನೆಯ ಯಜಮಾನನಾಗಿ ಆ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದನ್ನು ನಾಣಿಯವರು ನಿಭಾಯಿಸಿರುವ ಕಥಾನಾಯಕ ಲೋಕೇಶನ ಪಾತ್ರ ಕಟ್ಟಿಕೊಡಲಿದೆ. ನಾಯಕನಿಗೆಒಬ್ಬ ಮಗಳು ಮತ್ತು ಒಬ್ಬ ಮಗ ಇರುತ್ತಾನೆ. ಮಗಳುಕಾಲೇಜು ವಿದ್ಯಾರ್ಥಿನಿ. ಈ ಪಾತ್ರದಲ್ಲಿ ಕಿರುತೆರೆ ನಟಿಶ್ರುತಿ ಶಿವನಗೌಡ ನಟಿಸಿದ್ದು, ಮಗನ ಪಾತ್ರದಲ್ಲಿ ಹೊಸ ಪ್ರತಿಭೆ ಬಾಲ ಕಲಾವಿದ ಸಫೀನ್‌ ಬಣ್ಣ ಹಚ್ಚಿದ್ದಾರೆ. ಇವರ ಜತೆಗೆ ಪೋಷಕ ನಟರಾಗಿಟೆನಿಸ್‌ ಕೃಷ್ಣ ಮತ್ತು ರಾಮಕೃಷ್ಣ ಕಾಣಿಸಿಕೊಂಡಿದ್ದಾರೆ’ ಎಂದು ಅವರು ಮಾತು ವಿಸ್ತರಿಸಿದರು.

ADVERTISEMENT

ತಬಲಾ ನಾಣಿಯವರದು ಮಧ್ಯಮ ವರ್ಗದ ಗೃಹಸ್ಥನ ಪಾತ್ರ. ಅತ್ಯಂತ ಜಿಪುಣ.ಇಡೀ ಕಥೆ ಈ ಪಾತ್ರವನ್ನು ಕೇಂದ್ರೀಕರಿಸಿದ್ದು, ಪ್ರಮುಖವಾಗಿನಾಲ್ಕು ಪಾತ್ರಗಳ ಸುತ್ತ ಕಥೆ ಗಿರಕಿಹೊಡೆಯುತ್ತದೆ. ಮಂಜುಳಾ ಕಾಲ್ಪನಿಕ ಪಾತ್ರ. ಈ ಪಾತ್ರ ಏನೆನ್ನುವುದು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗಲಿದೆ. ಚಿತ್ರದ ಬಗ್ಗೆ ಪ್ರೇಕ್ಷಕನ ಕುತೂಹಲ ಕಾಯ್ದುಕೊಳ್ಳಲು ಈ ತಂತ್ರ ಹೆಣೆದಿದ್ದೇವೆ ಎಂದು ಅವರು ತಮ್ಮ ‘ಮಿಸ್ಟ್ರರಿ ಆಫ್‌ ಮಂಜುಳಾ’ಚಿತ್ರದ ಶೀರ್ಷಿಕೆಯ ಗುಟ್ಟನ್ನೂ ಕಾಯ್ದುಕೊಂಡರು.

ಸ್ವತಂತ್ರ ನಿರ್ದೇಶನದ ಬಗ್ಗೆ ಎಲ್ಲ ನಿರ್ದೇಶಕರಿಗೆ ಇರುವಂತೆಯೇ ಎಕ್ಸೈಟ್‌ಮೆಂಟ್‌ ಪ್ರವೀಣ್‌ ಅವರಿಗೂ ಇದೆಯಂತೆ. ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳುವುದು ಸವಾಲು ಎನಿಸಲೇ ಇಲ್ಲವಂತೆ.ಸಂಭಾಷಣೆಕಾರ ಮತ್ತು ನಿರ್ದೇಶಕ ಎಂ.ಎಸ್‌. ರಮೇಶ್‌ ಅವರ ಬಳಿ ಒಂದು ದಶಕ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವ ಅವರ ಬೆನ್ನಿಗಿದೆ. ಜತೆಗೆ ಸಾಧುಕೋಕಿಲ, ಯೋಗಿ ಜಿ. ರಾಜ್‌, ರಾಜೇಂದ್ರ ಸಿಂಗ್‌ ಬಾಬು, ಮಹೇಶ್‌ ರಾವ್‌ ಇವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವ ಸ್ವತಂತ್ರ ನಿರ್ದೇಶಕನಾಗುವ ಹಾದಿಯನ್ನು ಸುಗಮಗೊಳಿಸಿತಂತೆ.

ನಾಣಿ ಸೇರಿದಂತೆ ಚಿತ್ರತಂಡ ಪ್ರವೀಣ್‌ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದರಿಂದ ಅವರ ಜವಾಬ್ದಾರಿ ಸರಾಗವಾಗಿ ಸಾಗಿತಂತೆ. ‘ತಬಲಾ ನಾಣಿ, ಲಕ್ಷ್ಮಿ, ಟೆನಿಸ್‌ ಕೃಷ್ಣ, ರಾಮಕೃಷ್ಣ, ಶ್ರುತಿ ಅವರ ಸಹಕಾರ ಮತ್ತು ಬೆಂಬಲವನ್ನು ಎಂದೂ ಮರೆಯುವುದಿಲ್ಲ. ಈಗಷ್ಟೇ ಚಿತ್ರರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದೇನೆ. ಈ ಹೆಜ್ಜೆಗಳೇ ಮುಂದೆ ದೊಡ್ಡ ಹೆಜ್ಜೆಗಳಾಗಬೇಕೆಂಬ ಗುರಿ ಮತ್ತು ಕನಸೂ ಇದೆ’ ಎನ್ನುವ ಮಾತು ಸೇರಿಸಿದರು ಪ್ರವೀಣ್‌.

ಬೆಂಗಳೂರು ಹಾಗೂ ಸುತ್ತಮುತ್ತಲ ಜಾಗಗಳಲ್ಲಿ 21 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಇನ್ನಷ್ಟೇ ಹಾಡುಗಳ ಧ್ವನಿಮುದ್ರಿಕೆ ನಡೆಯಬೇಕಿದೆ. ರಾಜ್ಯ ಸರ್ಕಾರ ನೀಡುವ ಮಾರ್ಗದರ್ಶಿ ಸೂತ್ರಗಳನ್ನು ನೋಡಿಕೊಂಡು ಚಿತ್ರ ಬಿಡುಗಡೆ ದಿನಾಂಕ ನಿರ್ಧರಿಸಲಾಗುವುದು. ಇದೇ 28ರಂದು ಯೋಗರಾಜ್‌ ಭಟ್‌ ಅವರ ಪಂಚರಂಗಿ ಆಡಿಯೊ ಯೂಟ್ಯೂಬ್‌ ಚಾನೆಲ್‌ ಮೂಲಕ ಟೀಸರ್‌ ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ಹೇಳಿದರು.

ಈ ಚಿತ್ರಕ್ಕೆ ಚೌಡೇಶ್ವರಿ ಸಿನಿ ಆರ್ಟ್ಸ್‌ ಕ್ರಿಯೇಷನ್ಸ್‌ ಮತ್ತು ರವಿ ಶಾಮನೂರು ಫಿಲಂಸ್‌ನಡಿ ಡಾ.ನಾಗರಾಜ ಮುರುಡೇಶ್ವರ ಮತ್ತು ರವಿ ಶಾಮನೂರು ಬಂಡವಾಳ ಹೂಡಿದ್ದಾರೆ. ಸೋಚ್‌ ಸಿನಿಮಾಸ್‌ ಸಂಸ್ಥೆಯ ಸಹಭಾಗಿತ್ವ ಈ ಚಿತ್ರಕ್ಕೆ ಇದೆ.

ಹಾಲೇಶ್ ಎಸ್. ಛಾಯಾಗ್ರಾಹಣ, ಸಾಯಿ ಕಿರಣ್ ಸಂಗೀತ, ವೆಂಕಟೇಶ್ ಯು.ಡಿ.ವಿ ಸಂಕಲನ ಈ ಚಿತ್ರಕ್ಕೆ ಇದೆ.ಸಂಭಾಷಣೆ ಎಂ.ಎಸ್‌. ರಮೇಶ್‌ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.