ನಟ ರಾಜೇಶ್
ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ ರಾಜೇಶ್ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಾಜೇಶ್ ಅವರಿಗೆ 75 ವರ್ಷ ವಯಸ್ಸಾಗಿತ್ತು. ಪುತ್ರಿ ದಿವ್ಯ ಮತ್ತು ಮಗ ದೀಪಕ್ ಅವರನ್ನು ಅಗಲಿದ್ದಾರೆ. ಅವರ ಪತ್ನಿ ಜೋನ್ ಸಿಲ್ವಿಯಾ ಈ ಹಿಂದೆಯೇ ನಿಧನರಾಗಿದ್ದರು.
ರಾಜೇಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಚೆನ್ನೈನ ರಾಮಪುರಂನಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ.
1949ರ ಡಿಸೆಂಬರ್ 20ರಂದು ತಮಿಳುನಾಡಿನ ತಿರುವರೂರು ಜಿಲ್ಲೆಯ ಮನ್ನಾರ್ಗುಡಿಯಲ್ಲಿ ಜನಿಸಿದ ರಾಜೇಶ್, ಸಿನಿಮಾ ರಂಗಕ್ಕೆ ಬರುವ ಮೊದಲು ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.
ಕೆ. ಬಾಲಚಂದರ್ ನಿರ್ದೇಶನದ ‘ಅವಳ್ ಒರು ಥೋಡರ್ಕಥೈ’ (1974) ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ 1979ರಲ್ಲಿ ತೆರಕಂಡಿದ್ದ ಕಣ್ಣಿಪ್ಪರವತಿಲೆ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟರಾಗಿ ಅಭಿನಯಿಸಿದ್ದರು.
ರಾಜೇಶ್ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಜಯ್ ಸೇತುಪತಿ-ಕತ್ರಿನಾ ಕೈಫ್ ನಟನೆಯ ‘ಮೇರಿ ಕ್ರಿಸ್‌ಮಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ರಾಜೇಶ್ ಅವರು 1985ರಲ್ಲಿ ಚೆನ್ನೈನ ಕೆ.ಕೆ. ನಗರದ ಬಳಿ ಚಲನಚಿತ್ರ ಚಿತ್ರೀಕರಣಕ್ಕಾಗಿ ಬಂಗಲೆಯನ್ನು ನಿರ್ಮಿಸಿದ್ದರು. ಇದನ್ನು ಅಂದಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಉದ್ಘಾಟಿಸಿದ್ದರು.
ಕೆ. ಬಾಲಚಂದರ್, ಕಮಲ್ ಹಾಸನ್ ಅವರಂತ ಹಿರಿಯ ನಟರೊಂದಿಗೆ ಅಭಿನಯಿಸಿದ್ದ ರಾಜೇಶ್ ಅವರು ಬರಹಗಾರ, ಡಬ್ಬಿಂಗ್ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.