ADVERTISEMENT

ತಮಿಳು ಸಿನಿಮಾದ ‘ವಿವೇಕ’ದ ಧ್ವನಿ

ಸ್ಕ್ರಿಪ್ಟ್‌ ಬರಹಗಾರ, ಸುಧಾರಕ, ಹಾಸ್ಯ ದಿಗ್ಗಜನವರೆಗೆ ವರ್ಣರಂಜಿತ ಯಾತ್ರೆ

ಶರತ್‌ ಹೆಗ್ಡೆ
Published 17 ಏಪ್ರಿಲ್ 2021, 15:24 IST
Last Updated 17 ಏಪ್ರಿಲ್ 2021, 15:24 IST
ನಟ ವಿವೇಕ್‌ (ಫೇಸ್‌ಬುಕ್‌ ಚಿತ್ರ)
ನಟ ವಿವೇಕ್‌ (ಫೇಸ್‌ಬುಕ್‌ ಚಿತ್ರ)   

ಬೆಂಗಳೂರು: ‘ಮನತಿ ಉರುಧಿ ವೆಂದಂ’ 1987ರಲ್ಲಿ ತೆರೆಗೆ ಬಂದ ತಮಿಳು ಚಿತ್ರ. ಅದರಲ್ಲಿ ಸಣ್ಣ ಪಾತ್ರವೊಂದು ಹಾದು ಹೋಗುತ್ತದೆ. ಹಾಸ್ಯಪ್ರಜ್ಞೆಯ ಸೂಕ್ಷ್ಮತೆ, ಸಮಯಪ್ರಜ್ಞೆ ನೋಡಿ ಅಂದಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್‌ ಅವರು ವಿವೇಕ್‌ ಅವರಿಗೆ ಈ ಪಾತ್ರ ನೀಡಿದ್ದರು. ಅಲ್ಲಿಂದ ವಿವೇಕ್‌ ಹಿಂದಿರುಗಿ ನೋಡಲಿಲ್ಲ. ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳ ಬೆಳ್ಳಿತೆರೆಯಲ್ಲಿ ಪ್ರೇಕ್ಷಕರನ್ನು ನಗಿಸಿದರು. ಹಾಸ್ಯದಿಗ್ಗಜ ಎಂದು ಕರೆಸಿಕೊಂಡರು.

ವಾಸ್ತವವಾಗಿ ವಿವೇಕ್‌ ಅವರು ತಮ್ಮ ಸಿನಿಬದುಕು ಆರಂಭಿಸಿದ್ದು ಸಹಾಯಕ ನಿರ್ದೇಶಕ ಹಾಗೂ ಸ್ಕ್ರಿಪ್ಟ್‌ ಬರಹಗಾರರಾಗಿ. ‘...ಉರುಧಿ ವೆಂದಂ’ ಬಳಿಕ ಬಾಲಚಂದರ್‌ ಅವರು ‘ಪುಟ್ಟು ಪುಟ್ಟು ಅರ್ಥಂಗಳ್‌’ ಚಿತ್ರದಲ್ಲಿ ಪ್ರಮುಖ ಹಾಸ್ಯ ಪಾತ್ರ ನೀಡಿದರು. ಆ ಚಿತ್ರದಲ್ಲಿ ಪದೇಪದೇ ಹೇಳುವ ಪ್ರಮುಖ ಸಂಭಾಷಣೆ ‘ಇನ್ನಿಕಿ ಸೆತ್ತ ನಾಲಾಯಕ್ಕು ಪಾಲ್‌’ ಕೆಲಕಾಲ ಜನಪ್ರಿಯ ನುಡಿಗಟ್ಟೇ ಆಗಿಹೋಗಿತ್ತು.

90ರ ದಶಕದ ಕೊನೆಯ ಭಾಗದಿಂದ ಸುಮಾರು ಎರಡುದಶಕ ವಿವೇಕ್‌ ವೃತ್ತಿಬದುಕಿನ ಪರ್ವಕಾಲ. ಹರಿತವಾದ ಮಾತು, ಸಂಭಾಷಣೆಯೇ ಅವರ ಅಭಿನಯದ ಪ್ಲಸ್‌ ಪಾಯಿಂಟ್‌.

ADVERTISEMENT

‘ಪೆರಸಗನ್‌’, ‘ರನ್‌’, ‘ಧೂಳ್‌’, ‘ಅನ್ನಿಯನ್‌’ ಮತ್ತು ‘ಶಿವಾಜಿ’ಯಲ್ಲಿ ಅವರು ಪ್ರಮುಖ ಹಾಸ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

ಹೆಣ್ಣು ಶಿಶು ಉಳಿಸಿ ಹೋರಾಟ

ತೂತ್ತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿಯಲ್ಲಿ ಜನಿಸಿದ್ದ ವಿವೇಕ್‌ ಹಲವು ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳಲ್ಲೂ ತೊಡಗಿದ್ದರು. ದಕ್ಷಿಣ ತಮಿಳುನಾಡಿನಲ್ಲಿ ಜೀವಂತವಾಗಿದ್ದ ಹೆಣ್ಣು ಶಿಶುಹತ್ಯೆ ತಡೆ ವಿರುದ್ಧ ಧ್ವನಿಯೆತ್ತಿದ್ದರು. ಜಾತಿ ಸಂಘರ್ಷ, ಮೂಢನಂಬಿಕೆಗಳ ವಿರುದ್ಧ ಹೋರಾಟ ನಡೆಸಿಯೂ ಗಮನ ಸೆಳೆದು ಯಶಸ್ವಿಯೂ ಆಗಿದ್ದರು.

ಈ ಸುಧಾರಣೆಯ ಹೋರಾಟದಲ್ಲಿ ಅವರಿಗೆ ಬೆಂಬಲವಾಗಿದ್ದವರು ಹಿರಿಯ ಹೋರಾಟಗಾರ ಇ.ವಿ. ರಾಮಸ್ವಾಮಿ (ಪೆರಿಯಾರ್‌). ಈ ಸಮಯದಲ್ಲಿ ಜನರ ಜಡ್ಡುಗಟ್ಟಿದ ಮನಃಸ್ಥಿತಿಯ ಬಗ್ಗೆ ವಿವೇಕ್‌ ಅವರು ತೀಕ್ಷ್ಣವಾಗಿ ಹೇಳುತ್ತಿದ್ದ ಸಂಭಾಷಣೆಯೊಂದು ನೆನಪಾಗುತ್ತದೆ. ‘ಇಂಥ ಸಾವಿರ ಪೆರಿಯಾರ್‌ (ರಾಮಸ್ವಾಮಿ)ಗಳು ಬಂದರೂ ನೀವು ಬದಲಾಗುವುದಿಲ್ಲ’. ಈ ಸಂಭಾಷಣೆಯೇ ರಾಮಸ್ವಾಮಿ ಅವರ ಗಮನ ಸೆಳೆದಿತ್ತು ಎಂದು ಅಲ್ಲಿನ ಜನರು ನೆನಪಿಸಿಕೊಳ್ಳುತ್ತಾರೆ.

ವಿವೇಕ್‌ ಅವರ ಕಲಾ ಸೇವೆ, ಸಮಾಜ ಸುಧಾರಣೆಯ ಸೇವೆ ಗಮನಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿತ್ತು. ಸತ್ಯಭಾಮಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿತ್ತು.

ಏ. 15ರಂದು ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದ ವಿವೇಕ್‌, ‘ಅರ್ಹರಾದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಕರೆ ನೀಡಿದ್ದರು. ತಮಿಳುನಾಡು ರಾಜ್ಯ ಸರ್ಕಾರ ಅವರನ್ನು ಆರೋಗ್ಯ ಸಂದೇಶಗಳ ರಾಯಭಾರಿಯನ್ನಾಗಿ ಘೋಷಿಸಿತ್ತು.

ಅಂಬರೀಷ್‌ ಮತ್ತು ವಿವೇಕ್

ಕನ್ನಡದ ರೆಬಲ್ ಸ್ಟಾರ್ ನಟ ದಿವಂಗತ ಅಂಬರೀಷ್ ಅವರ ಮೇಲೆ ವಿವೇಕ್ ಅವರಿಗೆ ಅಭಿಮಾನವಿತ್ತು. ಒಂದು ದಿನ ಯಾವುದೇ ಮುನ್ಸೂಚನೆ ನೀಡದೇ ವಿವೇಕ್‌, ಅಂಬರೀಷ್‌ ಮನೆಗೆ ಬಂದಿದ್ದರು. ‘ವಿವೇಕ್‌ ಆಗಮನ ನಮ್ಮಿಬ್ಬರಿಗೆ ಅಚ್ಚರಿ ಮತ್ತು ಖುಷಿ ಆಗಿತ್ತು. ಯಾಕೆಂದರೆ ನಾವಿಬ್ಬರೂ ಅವರ ಪ್ರತಿಭೆಗೆ ಅಭಿಮಾನಿಗಳಾಗಿದ್ದೆವು. ಅಭಿಮಾನದಿಂದ ಮಾತನಾಡಿದರು’ ಎಂದು ಅಂಬರೀಷ್‌ ಪತ್ನಿ, ಸಂಸದೆ ಸುಮಲತಾ ಅಂಬರೀಷ್‌ ಟ್ವಿಟರ್‌ನಲ್ಲಿ ನೆನಪಿಸಿ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.