ರೇವಂತ್ ರೆಡ್ಡಿ ಜೊತೆ ರಾಹುಲ್ ಸಿಪ್ಲಿಗುಂಜ್
ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಸೂಪರ್‌ಹಿಟ್ ಸಿನಿಮಾ ‘ಆರ್‌ಆರ್‌ಆರ್’ನಲ್ಲಿ ‘ನಾಟು ನಾಟು’ ಹಾಡಿನ ಮೂಲಕ ಜಾಗತಿಕ ಖ್ಯಾತಿ ಗಳಿಸಿರುವ ಗಾಯಕ ರಾಹುಲ್ ಸಿಪ್ಲಿಗುಂಜ್ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕೊಟ್ಟ ಭರವಸೆಯಂತೆ ₹1ಕೋಟಿ ಪ್ರೋತ್ಸಾಹಧನ ನೀಡಿದ್ದಾರೆ.
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮಹಾಕಾಳಿ ಹಬ್ಬದ ಉತ್ಸವದಲ್ಲಿ ಸಹಾಯಧನದ ಚೆಕ್ ಅನ್ನು ರಾಹುಲ್ ಅವರಿಗೆ ಹಸ್ತಾಂತರಿಸಲಾಗಿದೆ.
‘ಆರ್‌ಆರ್‌ಆರ್’ ಸಿನಿಮಾದ ಜನಪ್ರಿಯ ‘ನಾಟು ನಾಟು’ ಹಾಡಿಗೆ ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ 2023ನೇ ಸಾಲಿನ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರು ಸಂಯೋಜಿಸಿದ್ದ ಹಾಡಿಗೆ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲಭೈರವ ಅವರು ಧ್ವನಿ ನೀಡಿದ್ದರು.
‘ರಾಹುಲ್ ಸಿಪ್ಲಿಗುಂಜ್ ಅವರು ಒಬ್ಬ ಪ್ರತಿಭಾವಂತ ಹಾಡುಗಾರ ಆಗಿದ್ದು ಅವರು ಇಂದಿನ ಯುವ ಪೀಳಿಗೆಗೆ ಮಾದರಿ’ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ರಾಹುಲ್ ಅವರ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದ ಮೇಲೆ ಅವರನ್ನು ಭೇಟಿಯಾಗಿದ್ದ ರೇವಂತ್ ರೆಡ್ಡಿ ಅವರು ತಮ್ಮ ಜೇಬಿನಿಂದ ₹10 ಲಕ್ಷ ಪ್ರೋತ್ಸಾಹ ಧನ ನೀಡಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಜಯಗಳಿಸಿ ಅಧಿಕಾರಕ್ಕೆ ಬಂದರೆ ರಾಹುಲ್ ಅವರಿಗೆ ₹1ಕೋಟಿ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದರು.
2009ರಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ 35 ವರ್ಷದ ರಾಹುಲ್ ಅವರು ಹೈದರಾಬಾದ್‌ನ ಬಡಕುಟುಂಬವೊಂದರಿಂದ ಬಂದಿದ್ದಾರೆ. 2019ರಲ್ಲಿ ತೆಲುಗು ಬಿಗ್ ಬಾಸ್ ವಿಜೇತರಾಗಿದ್ದ ಅವರು ಸಿನಿಮಾಗಳಲ್ಲಿಯೂ ನಟಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.