
ತಮ್ಮ ಸಿನಿ ಜೀವನದ ಸೆಕೆಂಡ್ ಇನಿಂಗ್ಸ್ ಆರಂಭಿಸಿರುವ ನಟ ಕೋಮಲ್ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಯಲಾಕುನ್ನಿ’, ‘ಕೋಣ’ ಬಳಿಕ ‘ತೆನಾಲಿ ಡಿಎ.ಎಲ್‌ಎಲ್‌ಬಿ’ ಮೂಲಕ ಪ್ರೇಕ್ಷಕರನ್ನು ನಗಿಸಲು ಮತ್ತೊಮ್ಮೆ ಬರುತ್ತಿದ್ದಾರೆ.
ಸಿದ್ಧ್ರುವ್(ಸಿದ್ದು) ಈ ಸಿನಿಮಾ ನಿರ್ದೇಶಿಸುತ್ತಿದ್ದು, ಶೀರ್ಷಿಕೆಯೇ ಹೇಳುವಂತೆ ಕೋಮಲ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಓದಿನಲ್ಲಿ ಜಸ್ಟ್ ಪಾಸ್ ಆಗಿರುವ ತೆನಾಲಿಯ ವಕೀಲ ವೃತ್ತಿಯಲ್ಲಿನ ಕಥೆ ಇದಾಗಿದೆ. ಈ ಹಿಂದೆ ವಿಜಯ ರಾಘವೇಂದ್ರ ನಟನೆಯ ‘ಮರೀಚಿ’ ಸಿನಿಮಾವನ್ನು ಸಿದ್ದು ನಿರ್ದೇಶಿಸಿದ್ದರು. ಇದೀಗ ಕೋಮಲ್‌ಗಾಗಿ ಅವರು ವಿಭಿನ್ನವಾದ ಹಾಗೂ ಈಗಿನ ಕಾಲಘಟ್ಟಕ್ಕೆ ಸರಿಹೊಂದುವ ಕಥೆಯನ್ನು ಬರೆದಿದ್ದಾರೆ ಎಂದಿದೆ ಚಿತ್ರತಂಡ. ವಿಚ್ಛೇದನ ಕೊಡಿಸುವ ಲಾಯರ್ ಜೀವನದಲ್ಲೇ ವಿಚ್ಛೇದನದ ಸ್ಥಿತಿ ಬಂದಾಗ ಏನಾಗುತ್ತದೆ ಎನ್ನುವ ಕಥೆ ಸಿನಿಮಾದಲ್ಲಿರಲಿದೆ ಎನ್ನಲಾಗಿದೆ.
ಸದ್ಯ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಇಳಿಯಲಿದೆ. ಇದೇ ಮೊದಲ ಬಾರಿಗೆ ಲಾಯರ್ ಆಗಿ ಅಭಿನಯ ಮಾಡಲಿರುವ ಕೋಮಲ್ ನಿಜ ಜೀವನದಲ್ಲಿಯೂ ಎಲ್‌ಎಲ್‌ಬಿ ಓದಿದ್ದಾರೆ. ಚಿತ್ರಕ್ಕೆ ಸಿದ್ದು ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಿದ್ದು ಜೊತೆಗೆ ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್ ಮಹಾಲಿಂಗಯ್ಯ, ರೇಣುಕಾಪ್ರಸಾದ್ ಬಂಡವಾಳ ಹಾಕಿದ್ದಾರೆ. ರಿತ್ವಿಕ್ ಮುರಳೀಧರನ್ ಸಂಗೀತ ನಿರ್ದೇಶನ, ಉದಯ್ ಲೀಲಾ ಛಾಯಾಚಿತ್ರಗ್ರಹಣ ಚಿತ್ರಕ್ಕಿರಲಿದೆ.
ಈ ಸಿನಿಮಾ ಜೊತೆಗೆ ‘ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್’, ‘ರೋಲೆಕ್ಸ್’ ಸಿನಿಮಾಗಳು ಕೋಮಲ್ ಕೈಯಲ್ಲಿದ್ದು, ‘ವಾರೆವ್ಹಾ-2’ ಸಿನಿಮಾ ಮಾಡಲು ಯೋಚನೆಯಲ್ಲೂ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.